ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಬಗ್ಗೆ ಘೋಷಣೆ ಮಾಡಿತು. ಆದರೆ ಜಾರಿ ಮಾಡಲಿಲ್ಲ. ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು. ಅವರಿಗೆ ನೀಜಕ್ಕೂ ಈ ವಿಚಾರದಲ್ಲಿ ಇಚ್ಛಾಶಕ್ತಿ ಇದ್ದರೆ ಈ ಚುನಾವಣೆಯಲ್ಲಿ ಇದನ್ನು ಜಾರಿ ಮಾಡಲಿ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆಗ್ರಹಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಇನ್ನು ಕಾಲ ಮಿಂಚಿಲ್ಲ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಬಹುಮತವಿರುವ ಬಿಜೆಪಿ ಈ ಕಾಯ್ದೆ ಜಾರಿ ಮಾಡಬೇಕು. ಆ ಮೂಲಕ ತಾವು ಮಹಿಳೆಯರ ಪರವಿರುವುದನ್ನು ಸಾಬೀತುಪಡಿಸಲಿ” ಎಂದರು.
“2024ರ ಚುನಾವಣೆಯ ಪ್ರಣಾಳಿಕೆಯಲ್ಲಿ ಮಹಿಳೆಯರ ಬೇಡಿಕೆಯನ್ನು ಚರ್ಚೆ ಮಾಡಿ ನಾವು ಪ್ರಸ್ತಾವನೆ ಸಲ್ಲಿಸುತ್ತೇವೆ. ಮಹಿಳೆಯರ ಸಂಖ್ಯೆ ಅರ್ಧದಷ್ಟಿದ್ದು ನಮಗೆ ಬೇಕಾದ ಬೇಡಿಕೆಗಳನ್ನು ಅವರ ಮುಂದೆ ಇಡುತ್ತೇವೆ. ಮಹಿಳೆಯರಿಗೆ ಬೆಲೆ ಏರಿಕೆ ನಡುವೆ ಆರ್ಥಿಕ ಶಕ್ತಿ ನೀಡಬೇಕು. ಉದ್ಯೋಗ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಸಾಮಾಜಿಕ ಸಬಲೀಕರಣ, ಆರೋಗ್ಯದ ಸಬಲೀಕರಣ, ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಳ, ರಾಜಕೀಯ ಸಬಲೀಕರಣ. ಮಹೀಳಾ ಮೀಸಲಾತಿಯನ್ನು ಶೇ.33ರಷ್ಟು ಜಾರಿ ಮಾಡಿದ್ದು ರಾಜೀವ್ ಗಾಂಧಿ ಅವರು. ಇದರಿಂದಗಿ ನನ್ನಂತಹ ಅನೇಕ ಮಹಿಳೆಯರು ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ” ಎಂದು ತಿಳಿಸಿದರು.
“ಮಹಿಳೆಯರ ಮೇಲಿನ ದೌರ್ಜನ್ಯ ವಿಚಾರದಲ್ಲಿ ನಮ್ಮ ದೇಶದ ಕಾನೂನು ಎಷ್ಟೇ ಕಠಿಣವಾದರೂ ಮಹಿಳೆಯರ ರಕ್ಷಣೆ ಆಗುತ್ತಿಲ್ಲ. ಹತ್ರಾಸ್ ಪ್ರಕರಣದಿಂದ ಬಿಲ್ಕಿಸ್ ಬಾನು ಅವರ ಪ್ರಕರಣಗಳೇ ಸಾಕ್ಷಿ. ಬಿಲ್ಕಿಸ್ ಬಾನು ಅವರ ಪ್ರಕರಣದಲ್ಲಿ ಅಪರಾಧಿಗಳಿಗೆ ಕ್ಷಮೆ ನೀಡಿ ಅವರನ್ನು ಬಿಡುಗಡೆ ಮಾಡಿ ಸಂಭ್ರಮಿಸಲಾಗಿತ್ತು. ಹೀಗಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುವಂತಾಗಬೇಕು” ಎಂದರು.
“ಈ ನಿಟ್ಟಿನಲ್ಲಿ ಭಾರತ ಜೋಡೋ ನ್ಯಾಯ ಯಾತ್ರೆ ಮಣಿಪುರದಿಂದ ಮುಂಬೈವರೆಗೂ ನಡೆಯುತ್ತಿದೆ. ಮಣಿಪುರದಲ್ಲಿನ ಗಲಭೆ ಸಂದರ್ಭದಲ್ಲಿ ಬಿಜೆಪಿಯ ಯಾವೊಬ್ಬ ನಾಯಕರು ಅಲ್ಲಿಗೆ ಹೋಗಿ ಅಲ್ಲಿನ ಸಂತ್ರಸ್ತರಿಗೆ ಧೈರ್ಯ ಹೇಳಲಿಲ್ಲ. ರಾಹುಲ್ ಗಾಂಧಿ ಅವರು ಮಾತ್ರ ಅಲ್ಲಿಗೆ ಹೋಗುತ್ತಾರೆ. ಸಮಾಜದ ಎಲ್ಲಾ ವರ್ಗದವರಿಗೂ ನ್ಯಾಯ ಸಿಗಬೇಕು. ಮಹಿಳೆಯರು, ಯುವಕರು, ಕೃಷಿಕರು ಹಾಗೂ ಕಾರ್ಮಿಕರಿಗೆ ನ್ಯಾಯ ಸಿಗುವಂತೆ ಮಾಡುವುದು ಈ ಯಾತ್ರೆಯ ಉದ್ದೇಶ” ಎಂದರು.
“ರಾಹುಲ್ ಗಾಂಧಿ ಅವರಿಗೆ ಈ ಯಾತ್ರೆ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆ ಮೂಡುತ್ತದೆ. ರಾಹುಲ್ ಗಾಂಧಿ ಅವರು ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದ ವ್ಯಕ್ತಿ. ಎಲ್ಲವನ್ನು ಬಿಟ್ಟು ಜನರಿಗಾಗಿ ಹೋರಾಟ ಮಾಡುತ್ತೇನೆ ಎಂದು ಸಂತನ ರೀತಿಯಲ್ಲಿ ಯಾತ್ರೆ ಮಾಡುತ್ತಿದ್ದಾರೆ. ಇದು ದೇಶದ ಜನರಿಗಾಗಿ ಅವರ ಬದ್ಧತೆ” ಎಂದು ಹೇಳಿದರು.
“ತನ್ನ ಅಜ್ಜಿ, ತಂದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ನಾನು ಈ ದೇಶದ ಜನರಿಗಾಗಿ ಬದುಕಬೇಕು ಎಂದು ತೀರ್ಮಾನಿಸಿದರು. ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾಗುವ ಅವಕಾಶವಿದ್ದರೂ ಅವರು ಅದನ್ನು ತ್ಯಾಗ ಮಾಡಿದರು” ಎಂದರು.