Homeಕರ್ನಾಟಕಸಿಬಿಐ ಪ್ರಕರಣ | ಯಾರ ನಾಲಿಗೆಯಲ್ಲಿ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ: ಡಿ ಕೆ ಶಿವಕುಮಾರ್

ಸಿಬಿಐ ಪ್ರಕರಣ | ಯಾರ ನಾಲಿಗೆಯಲ್ಲಿ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ: ಡಿ ಕೆ ಶಿವಕುಮಾರ್

ಆರ್‌. ಅಶೋಕ್‌ ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಮಾತನಾಡಲು ಆಗುವುದಿಲ್ಲ. ಅವರು ಅವರದೇ ಪಕ್ಷದ ವಕ್ತಾರರಾಗಿ ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ. ಹೊಸದಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹೊಸದರಲ್ಲಿ ಜೋರಾಗಿ ಬಟ್ಟೆ ಒಗೆಯಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಲೇವಡಿ ಮಾಡಿದರು.

ದೆಹಲಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡುವಾಗ, ‘ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಪ್ಲಾನ್ ಮಾಡುತ್ತಿದ್ದಾರೆ ಎಂಬ ಆರ್. ಅಶೋಕ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.

ಬೋಗಸ್ ಜನತಾ ದರ್ಶನ, ಸರ್ಕಾರ ಈಗ ಎಚ್ಚರವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ “ನಾವು ಎಲ್ಲರ ಮನಸ್ಥಿತಿ ಅರಿಯುತ್ತಿದ್ದೇವೆ. ಮಾತನಾಡಲಿ ಬಿಡಿ” ಎಂದರು.

ಸಿಬಿಐ ತನಿಖೆಗೆ ನೀಡಿದ್ದ ಆದೇಶ ಹಿಂಪಡೆದ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿ, “ನನ್ನ ವಿರುದ್ಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ನಂತರ ಅನೇಕರು ಮಾತನಾಡುತ್ತಿದ್ದಾರೆ. ಯಾರ್ಯಾರ ಮನಸ್ಸು ಮತ್ತು ನಾಲಿಗೆ ಮೇಲೆ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ” ಎಂದು ಹೇಳಿದರು.

“ತನಿಖೆಗೆ ಅನುಮತಿ ವಾಪಸ್ ಪಡೆದಿರುವ ಬೆಳವಣಿಗೆಯಿಂದ ಎಲ್ಲರ ಮನಸ್ಥಿತಿಯೂ ಅರ್ಥವಾಗುತ್ತಿದೆ. ಯಾರ್ಯಾರು ಗೆಳೆಯರು, ಅವರ ಭಾವನೆ ಏನಿದೆ ಎಂಬುದು ಈಗ ತಿಳಿಯುತ್ತಿದೆ. ಸಿಬಿಐ ತನಿಖೆಗೆ ಅನುಮತಿ ಹಿಂಪಡೆದಿರುವ ಬಗ್ಗೆ ಈಗ ಮಾತನಾಡಲು ಹೋಗುವುದಿಲ್ಲ. ಮುಂದೆ ಅದರ ಬಗ್ಗೆ ಖಂಡಿತವಾಗಿಯೂ ಮಾತನಾಡುತ್ತೇನೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ” ಎಂದರು.

“ತೆಲಂಗಾಣದಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ಕೇಳಿದಾಗ “ಕರ್ನಾಟಕದಂತೆ ನಿಖರವಾಗಿ ಇಲ್ಲಿ ಹೇಳಲು ಬರುವುದಿಲ್ಲ. ನಾನು ಕರ್ನಾಟಕದ ಪ್ರತಿಯೊಂದು ಕ್ಷೇತ್ರದ ಚಿತ್ರಣವನ್ನು ಅವಲೋಕಿಸಿದ್ದೆ. ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವುದು ನಿಶ್ಚಿತ. ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ರಚನೆ ಆಗಲಿದ್ದು, ಸಚಿವ ಸಂಪುಟದ ಮೊದಲ ಸಭೆಯಲ್ಲಿ ಡಿ.9 ರಂದು ಎಲ್ಲಾ 6 ಗ್ಯಾರಂಟಿಗಳನ್ನು ಜಾರಿಗೆ ತರಲು ಅನುಮೋದನೆ ನೀಡುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಕರ್ನಾಟಕ ಮಾದರಿಯಂತೆ ತೆಲಂಗಾಣದಲ್ಲಿ 6 ಗ್ಯಾರಂಟಿಗಳನ್ನು ನೀಡಲಾಗಿದೆ. ದಲಿತ ಸಿಎಂ ಸೇರಿದಂತೆ ಕೆಸಿಆರ್ ಅವರ ನೇತೃತ್ವದ ಸರ್ಕಾರ 10 ವರ್ಷಗಳಲ್ಲಿ ತಾನು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ತೆಲಂಗಾಣ ರಾಜ್ಯ ರಚನೆಗೆ ಸೋನಿಯಾ ಗಾಂಧಿ ಅವರೇ ಕಾರಣ. ತೆಲಂಗಾಣದ ಜನರಿಗೆ ಸೋನಿಯಾಗಾಂಧಿ ಅವರ ಋಣ ತೀರಿಸಬೇಕು ಎನ್ನುವ ಭಾವನೆ ಬಂದಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments