ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರ ಗೆಲ್ಲದಿದ್ದರೆ ಐದು ಗ್ಯಾರಂಟಿ ರದ್ದು ಎಂದು ಮಾಗಡಿ ಶಾಸಕರು ಹೇಳಿರುವ ಬಗ್ಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, “ಇದು ಬ್ಲ್ಯಾಕ್ ಮೇಲ್ ರಾಜಕಾರಣ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಹೇಳಿಕೆಯನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಅವರ ಮಾತಿಗೆ ಪ್ರಾಶಸ್ತ್ಯ ಕೊಡುವುದು ಅನಾವಶ್ಯಕ” ಎಂದರು.
“ಚುನಾವಣೆ ವೇಳೆ 3 ಸಾವಿರ, 5 ಸಾವಿರ ಬೆಲೆಯ ಉಡುಗೊರೆ ಕೊಡುತ್ತೇವೆ ಎಂದು ಹೇಳಿ ಗಿಫ್ಟ್ ಕೂಪನ್ ಗಳನ್ನು ಹಂಚಿ ಚುನಾವಣೆಯಲ್ಲಿ ಗೆದ್ದರು. ಅಮಾಯಕ ಹೆಣ್ಣುಮಕ್ಕಳನ್ನು ನಂಬಿಸಿ ಮೋಸ ಮಾಡಿದರು. ಆ ಗಿಫ್ಟ್ ಕಾರ್ಡ್ ಕೊಟ್ಟು ಜನರನ್ನು ವಂಚಿಸಿದ್ದಾರೆ. ಈ ಗ್ಯಾರಂಟಿ ಯೋಜನೆಗಳೂ ಅದೇ ರೀತಿ” ಎಂದು ಆರೋಪ ಮಾಡಿದರು.
“ಈ ಗ್ಯಾರಂಟಿಗಳು ಲೋಕಸಭೆ ಚುನಾವಣೆ ವರೆಗೆ ಮಾತ್ರ ಇರುತ್ತವೆ. ಪಕ್ಷದ ಮಟ್ಟದಲ್ಲಿ ಅಗಿರುವ ಚರ್ಚೆ ಬಗ್ಗೆ ಈ ವ್ಯಕ್ತಿ ಜನರ ಎದುರು ಹೇಳಿದ್ದಾರೆ. ಇವರೆಲ್ಲ ಇದನ್ನೆ ಚರ್ಚೆ ಮಾಡಿದ್ದಾರೆ. ಪಾರ್ಲಿಮೆಂಟ್ ವರೆಗೂ ಗ್ಯಾರಂಟಿ ಕೊಡೊಣ, ಬಳಿಕ ನಿಲ್ಲಿಸೋಣ ಎಂಬ ಚರ್ಚೆ ಆಗಿದೆ. ಅವರ ಒಳಗಡೆಯ ಚರ್ಚೆ ಇಲ್ಲಿ ಬಯಲಾಗಿದೆ. ಪಕ್ಷದ ರಹಸ್ಯ ರಿವೀಲ್ ಆಗಿದೆ” ಎಂದು ಹೇಳಿದರು.
“ಸಮರ್ಪಕವಾಗಿ ಗ್ಯಾರಂಟಿ ಕೊಡಲು ಅವಕಾಶ ಇದೆ. ಅದೇನು ಅಂತಹ ದೊಡ್ಡ ಕಾರ್ಯಕ್ರಮ ಅಲ್ಲ, ಕೊಡಲು ಸಮಸ್ಯೆಯೂ ಇಲ್ಲ. ಸರಿಯಾದ ಮಾರ್ಗದಲ್ಲಿ ಹೋಗಿದಿದ್ದರೆ ಈ ಐದು ಗ್ಯಾರಂಟಿಗಳನ್ನ ಕೊಟ್ಟು, ರಾಜ್ಯದ ಅಭಿವೃದ್ಧಿ ಸಹ ಮಾಡಬಹುದಿತ್ತು. ಅದು ಇವರ ತಪ್ಪುಗಳಿಂದ ಹೀಗೆ ಆಗಿದೆ” ಎಂದರು.
“ಬಿಜೆಪಿಯವರು ಅಕ್ಷತೆಗೆ ಜನರು ಮತ ಹಾಕುವುದಾದರೆ ಅದನ್ನು ಕಾಂಗ್ರೆಸ್ ನವರೂ ಮಾಡಲಿ. ಬೇಡ ಎಂದವರು ಯಾರು? ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ ಮಾಜಿ ಸಿಎಂ; ಅವರ ಅಕ್ಷತೆಗೆ ಜನ ಓಟ್ ಹಾಕಿದರೆ ನಿಮ್ಮ ಅಕ್ಷತೆಗೆ ಜನ ಓಟ್ ಹಾಕಲ್ವಾ? ನೀವೂ ಒಂದು ಪ್ರಯೋಗ ಮಾಡಿ” ಎಂದು ಹೇಳಿದರು.
ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, “ಕಾಂಗ್ರೆಸ್ ನಾಯಕರ ಹೇಳಿಕೆಗೆ ಸ್ವಾಗತ. 20ಎಕರೆಯಲ್ಲಿ ಅಲ್ಲ 100 ಎಕರೆಯಲ್ಲಿ ರಾಮಮಂದಿರ ಕಟ್ಟಿ, ನಿಮಗೆ ನನ್ನ ಬೆಂಬಲ ಇದೆ. ಇಡೀ ಬೆಟ್ಟವನ್ನೆಲ್ಲಾ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಿ” ಎಂದು ತಿಳಿಸಿದರು.
“ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅವರಿಗೆ ಭಯ ತಂದಿದೆ. ಇವರು ಏನೇ ತಿಪ್ಪರಲಾಗ ಹಾಕಿದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲ ಎನ್ ಡಿಎ ಮೈತ್ರಿ ಅಭ್ಯರ್ಥಿ ಗೆಲುವು ಖಚಿತ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.