ಏನು ಗೂಂಡಾಗಿರಿ ಮಾಡ್ತೀರಾ? ನಾನು ಯಾವುದಕ್ಕೂ ಹೆದರಲ್ಲ, ಏಳು ಕೋಟಿ ಜನರು ನೋಡ್ತಾ ಇದ್ದಾರೆ. ಜನ ಇವರಿಗೆ ಛೀ.. ಥೂ…ಅಂತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಏರು ಧ್ವನಿಯಲ್ಲೇ ಗೂಡುಗಿದರು.
ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಉತ್ತರಿಸುವಾಗ ಸಿದ್ದರಾಮಯ್ಯ ಗೂಂಡಾಗಿರಿ ಪದವನ್ನು ಬಳಕೆ ಮಾಡಿದ್ದಾರೆ ಎಂದು ಆಕ್ಷೇಪಿಸಿ, ಬಿಜೆಪಿ ಸದಸ್ಯರು ಗದ್ದಲು ಮಾಡಿದಾಗ ಸಿಎಂ ಗದರಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಕೋಟ ಶ್ರೀನಿವಾಸ ಪೂಜಾರಿ, “ವಿಧಾನಸೌಧದಲ್ಲಿ ತೊಡೆ ತಟ್ಟಿದ್ದು ನೀವಾ, ನಾವಾ? ನಮಗೆ ಗೂಂಡಾಗಿರಿ ಅಂತೀರಲ್ಲ, ಆಗ ತೊಡೆ ತಟ್ಟಿದ್ದು ಯಾರು? ನೀವು ಗೂಂಡಾಗಳು, ನಿಮ್ಮ ಗೂಂಡಾಗಿರಿಗೆ ನಾವು ಹೆದರುವುದಿಲ್ಲ” ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಮರು ಉತ್ತರಿಸಿ, “ನಾನು ಫ್ಯಾಕ್ಟ್ ಹೇಳುತ್ತಿದ್ದೇನೆ, ಫ್ಯಾಕ್ಟ್ ಈಸ್ ಫ್ಯಾಕ್ಟ್. ವಿಪಕ್ಷಗಳ ಈ ನಡೆ ಸಹಿಸಲ್ಲ, ನಾನು ಉತ್ತರ ಕೊಡಲ್ಲ. ಪ್ರಶ್ನೆ ಕೇಳಿದವರು ಸುಮ್ಮನಿರುವಾಗ ವಿಪಕ್ಷದ್ದವರದ್ದೇನು ಮಾತು” ಎಂದರು.
“ನಿರ್ಮಲಾ ಸೀತಾರಾಮನ್ ಕೂಡ ವಿರೋಧಿ ಧೋರಣೆ ತೋರಿಸಿದ್ದಾರೆ. ಅವರೇ ಬಜೆಟ್ ಒಪ್ಪಿಕೊಂಡಿದ್ದ 5300 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಆದರೆ ನಾವು 1 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ” ಎಂದು ಸಿದ್ದರಾಮಯ್ಯ ಹೇಳಿದರು.
“ಯೋಜನೆಗಳ ಮೇಲಿನ ಕಾಳಜಿಯಿಂದ 1 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1 ಸಾವಿರ ಕೋಟಿ ರೂ. ಹಣ ದ್ರೋಹ ಮಾಡಿದೆ. ಇದಕ್ಕೆ ಹಣಕಾಸು ಸಚಿವರು ಸಹಕಾರ ನೀಡಿದ್ದಾರೆ” ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸಿಎಂ ವಿಷಾದಕ್ಕೆ ವಿಪಕ್ಷಗಳ ಬಿಗಿ ಪಟ್ಟು
ಸಿಎಂ ಗೂಂಡಾ ಹೇಳಿಕೆ ಖಂಡಿಸಿ ಬಿಜೆಪಿ ಸದಸ್ಯರಿಂದ ಸಭಾತ್ಯಾಗ ಮಾಡಿದರು. ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಲೇ ಬೇಕು ಎಂದು ವಿಪಕ್ಷ ಬಿಗಿ ಪಟ್ಟು ಹಿಡಿಯಿತು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಸದಸ್ಯರ ಮನವೊಲಿಕೆ ಮಾಡಲು ಪ್ರಯತ್ನಿಸಿದರು.