ತಮ್ಮ ನಗರಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ನಾಗರಿಕ ಚಟುವಟಿಕೆಯಲ್ಲಿ ಶಾಲಾ ಮಕ್ಕಳ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ “ಬ್ರ್ಯಾಂಡ್ ಬೆಂಗಳೂರು ಐಡಿಯಾಥಾನ್ 2023” ಸ್ಪರ್ಧೆಯ ಅಂತಿಮ ಸುತ್ತಿಗೆ ಏಳು ಶಾಲಾ ತಂಡಗಳು ಆಯ್ಕೆಯಾಗಿವೆ.
ಕರ್ನಾಟಕ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆಯ ಮೂಲಕ ಬೆಂಗಳೂರು ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಸ್ಥಿರ ನಗರವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಐಡಿಯಾಥಾನ್ 2023 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೊಂದು ಅಂತರ್ ಶಾಲಾ ಸ್ಪರ್ಧೆಯಾಗಿದ್ದು, ಈ ಸ್ಪರ್ಧೆಯಲ್ಲಿ ನಗರದ ಸಮಸ್ಯೆಗಳಿಗೆ ಶಾಲಾ ಮಕ್ಕಳು ಪರಿಹಾರ ನೀಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಆಮೂಲಕ ಮಕ್ಕಳ ಮಿದುಳಿನ ಸಾಮರ್ಥ್ಯ ಪೋಷಿಸುವ ಪ್ರಯತ್ನವಾಗಿದೆ.
9ನೇ ತರಗತಿಯಿಂದ 12+ ಪಿಯುಸಿ ಕಾಲೇಜು ಮಕ್ಕಳ ಸ್ಪರ್ಧೆ ಇದಾಗಿದ್ದು, ಶ್ರೀಮತಿ ಐಶ್ವರ್ಯ ಡಿಕೆಎಸ್ ಹೆಗಡೆ ಈ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ಈ ಸ್ಪರ್ಧೆಗೆ ನೊಂದಣಿಯಾಗಿದ್ದ ಶಾಲೆಗಳ ಪೈಕಿ ಅಗ್ರ 50 ಶಾಲೆಗಳು ಈ ಸ್ಪರ್ಧೆಗೆ ಆಯ್ಕೆಯಾಗಿದ್ದವು. ನಂತರದ ಹಂತದ ಸ್ಪರ್ಧೆಯಿಂದ ಅಗ್ರ 25 ಶಾಲೆಗಳು ಸ್ಪರ್ಧೆಯಲ್ಲಿ ಮುಂದುವರಿದವು. ನಗರದ ವಿವಿಧ ಕ್ಷೇತ್ರಗಳ ಗಣ್ಯರು ಈ ಸ್ಪರ್ಧೆಯ ತೀರ್ಪುಗಾರರರಾಗಿದ್ದು ಶಾಲಾ ಮಕ್ಕಳು ನಗರದ ಅಭಿವೃದ್ಧಿಗೆ ತಮ್ಮ ಆಲೋಚನೆ ನೀಡಿದ್ದಾರೆ.
25 ಶಾಲೆಗಳ ಪೈಕಿ ಬನಶಂಕರಿಯ ಪ್ರೆಸಿಡೆನ್ಸಿ ಶಾಲೆ, ಎಸ್ ಜೆಆರ್ ಕೆಂಗೇರಿ ಪಬ್ಲಿಕ್ ಶಾಲೆ, ಆಕ್ರಿಡ್ಜ್ ಇಂಟರ್ ನ್ಯಾಷನಲ್ ಶಾಲೆ, ಸೇಂಟ್ ಮಾರ್ಕ್ಸ್ ಕಾನ್ವೆಂಟ್, ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ ಬನಶಂಕರಿ, ಮಿತ್ರಾ ಅಕಾಡೆಮಿ, ಕಸ್ತೂರಿ ನಗರ ಪ್ರೆಸಿಡೆನ್ಸಿ ಶಾಲೆ ಅಂತಿಮ ಸುತ್ತಿಗೆ ಪ್ರವೇಶ ಪಡೆದಿವೆ.
ಈ ಸ್ಪರ್ಧೆಯ ಅಂತಿಮ ಸುತ್ತನ್ನು ಜನವರಿ 13, 2024ರಂದು ನಡೆಯುವ ಯೂತ್ ಲೀಡರ್ ಶಿಪ್ ಸಮ್ಮೇಳನ 2023 ದಲ್ಲಿ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶಾಲಾ ಮಕ್ಕಳ ಜತೆ ಸಂವಾದ ನಡೆಸಲಿದ್ದಾರೆ. ಲೇಖಕಿ ಸುಧಾ ಮೂರ್ತಿ ಈ ಸಮ್ಮೇಳನದಲ್ಲಿ ಮುಖ್ಯ ತೀರ್ಪುಗಾರರಾಗಿರುತ್ತಾರೆ. ನಟ ರಮೇಶ್ ಅರವಿಂದ್ ಸ್ಪೂರ್ತಿ ಮಾತುಗಳನ್ನು ಆಡಲಿದ್ದಾರೆ.
ಯೂತ್ ಲೀಡರ್ ಶಿಪ್ ಸಮ್ಮೇಳನ ಹಾಗೂ ಐಡಿಯಾಥಾನ್ ಕಾರ್ಯಕ್ರಮವನ್ನು ಗ್ರೇಕ್ಯಾಪ್ಸ್ ನಾಲೆಡ್ಜ್ ಟ್ರೈಬ್ ಹಾಗೂ ಶಿಕ್ಷಣ ತಜ್ಞ ಗಿರಿ ಪಿಕ್ ಬ್ರೈನ್ ಬಾಲಸುಬ್ರಮನಿಯಂ ಅವರು ನಡೆಸಿಕೊಡಲಿದ್ದಾರೆ.