ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ (ಲಾಲ್ ಕೃಷ್ಣ ಅಡ್ವಾಣಿ) ಅವರಿಗೆ ದೇಶದ ಪರಮೋಚ್ಚ ಗೌರವವಾದ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, “ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವ ವಿಚಾರವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇದು ನನಗೆ ತುಂಬಾ ಸಂತಷದ ವಿಷಯ. ಈ ಬಗ್ಗೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಅಭಿನಂದಿಸಿದ್ದೇನೆ” ಎಂದು ತಿಳಿಸಿದ್ದಾರೆ.
“ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಅವರು ಒಬ್ಬರು. ಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣಾರ್ಹ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಉಪಪ್ರಧಾನಿಯಾಗಿ ದೇಶಸೇವೆ ಮಾಡುವವರೆಗಿನ ಜೀವನ ಅವರದು ಎಂದು” ಮೋದಿ ಬಣ್ಣಿಸಿದ್ದಾರೆ.
“ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡುವುದು ನನ್ನ ಪಾಲಿಗೆ ಅತ್ಯಂತ ಭಾವನಾತ್ಮಕ ಕ್ಷಣ. ಅವರೊಂದಿಗೆ ಮಾತುಕಥೆ ನಡೆಸಲು ಮತ್ತು ಅವರಿಂದ ಕಲಿಯಲು ನನಗೆ ಅಸಂಖ್ಯಾತ ಅವಕಾಶಗಳು ಸಿಕ್ಕಿರುವುದು ನನ್ನ ಪುಣ್ಯ” ಎಂದು ಮೋದಿ ಉಲ್ಲೇಖಿಸಿದ್ದಾರೆ.
ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾಗಿದ್ದ ಅಡ್ವಾಣಿ ಅವರು ಜನಸಂಘದ ಮೂಲಕ ರಾಜಕೀಯ ಜೀವನ ಆರಂಭಿಸಿದರು. ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜತೆಗೂಡಿ ಬಿಜೆಪಿಯನ್ನು ಕಟ್ಟಲು ದಶಕಗಳ ಕಾಲ ದೇಶಾದ್ಯಂತ ಸುತ್ತಾಡಿದ್ದಾರೆ.
ಬಿಜೆಪಿಯಲ್ಲಿ ಏನೂ ಇಲ್ಲದಿದ್ದಾಗ ಪಕ್ಷವನ್ನು ಕಟ್ಟುವುದರ ಜತೆಗೆ ಪ್ರತಿ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರಗಳು ಬರುವ ನಿಟ್ಟಿನಲ್ಲಿ ಕೆಲಸವನ್ನು ಆರಂಭಿಸಿದ್ದು ಇದೇ ಅಡ್ವಾಣಿ. ರಾಮಮಂದಿರ ನಿರ್ಮಾಣಕ್ಕೆ ರಥಯಾತ್ರೆ, ರಾಮಮಂದಿರ ನಿರ್ಮಾಣ ಹೋರಾಟ ಸೇರಿದಂತೆ ಇನ್ನಿತರೆ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ವಾಜಪೇಯಿ ಸರ್ಕಾರದಲ್ಲಿ ಗೃಹ ಸಚಿವ, ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಎಲ್ ಕೆ ಅಡ್ವಾಣಿ ಅವರು ತಾವು ಹೊಂದಿದ್ದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. 2014ರ ಬಳಿಕ ಬಿಜೆಪಿ ಮಾರ್ಗದರ್ಶಕ ಮಂಡಳಿಯ ಸದಸ್ಯರಾಗಿದ್ದರು.