ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆಯೇ ನಡೆಯುವ ಸಲುವಾಗಿ ಪ್ರಧಾನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ಅಸ್ತ್ರಕ್ಕೆ ಪರ್ಯಾಯವಾಗಿ ಹಣ ನೀಡುವ ಪ್ರತ್ಯಾಸ್ತ್ರ ಹೂಡಿ ಭರ್ಜರಿ ತಿರುಗೇಟು ನೀಡಿದೆ.
ಅನ್ನಭಾಗ್ಯ ಭರವಸೆಯಂತೆ ೧೦ ಕೆಜಿ ಆಹಾರಧಾನ್ಯವನ್ನು ನಾವು ಜುಲೈ೧ ರಿಂದ ನೀಡಬೇಕಾಗಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಅಕ್ಕಿ ಲಭ್ಯವಾಗುವವರೆಗೆ ಪ್ರತಿ ಕೆಜಿ ಅಕ್ಕಿಗೆ ೩೪ ರೂ.ನಂತೆ ೫ ಕೆಜಿ ಅಕ್ಕಿಯ ಮೊತ್ತ ರೂ.೧೭೦ ನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮಾಡಲು ತೀರ್ಮಾನಿಸಲಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಬಿಜೆಪಿ ಪಡಸಾಲೆಯಲ್ಲಿ ದಾವಾಗ್ನಿ ಸೃಷ್ಟಿಸಿದೆ.
ಅಕ್ಕಿ ದಾಸ್ತಾನು ನಮಗೆ ದೊರೆತ ತಕ್ಷಣದಿಂದ ಹಣದ ಬದಲು ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ವಿತರಿಸಲಾಗುವುದು. ರಾಜ್ಯದ ಜನರಿಗೆ ನಮ್ಮ ಸರ್ಕಾರ ನೀಡಿರುವ ಗ್ಯಾರೆಂಟಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬ ಅವರ ಮಾತು ಬಿಜೆಪಿಗೆ ಅತ್ತ ನುಂಗಲಾರದ ಇತ್ತ ಉಗುಳಲಾರದ ತುತ್ತಾಗಿ ಪರಿಣಮಿಸಿದೆ.
ರಾಜ್ಯ ಬಿಜೆಪಿಯವರು ಕೇಂದ್ರದೊಂದಿಗೆ ಮಾತನಾಡಿ ಬಡವರಿಗೆ ಅಕ್ಕಿ ಕೊಡಿಸಬೇಕಿತ್ತು. ನಾವು ಈ ಸಂಬಂಧ ಕೇಂದ್ರಕ್ಕೆ ಮನವಿ ಮಾಡಿದೆವು. ಆದರೆ, ಕೇಂದ್ರದ ಸಂಸ್ಥೆಗಳು ಸೂಚಿಸಿರುವ ಅಕ್ಕಿ ದರ ಹೆಚ್ಚಾಗಿದೆ. ೩೨.೯೪ ರೂಗಳ ಬದಲಿಗೆ, ೩೨.೨೪ ರೂ.ಗಳಿಗೆ ನೀಡುವಂತೆ ಕೋರಿದ್ದೇವೆ ಎಂದು ತಿಳಿಸಿದ ಅವರು ಪರೋಕ್ಷವಾಗಿ ರಾಜ್ಯ ಸರ್ಕಾರದ ಈ ಅಕ್ಕಿ ಬದಲಿಗೆ ಹಣ ನೀಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಅಸಹಕಾರವೇ ಪ್ರಮುಖ ಕಾರಣ ಎಂದು ಆರೋಪಿಸಿದರು.
ರಾಜ್ಯಕ್ಕೆ ಪ್ರತಿ ತಿಂಗಳು ೨,೨೯,೦೦೦ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದು, ಇದನ್ನು ಯಾವ ರಾಜ್ಯದವರೂ ಪೂರೈಸಲು ಸಾಧ್ಯವಿಲ್ಲ. ಈಗ ಬೇರೆ ರಾಜ್ಯಗಳಲ್ಲಿಯೂ ಅಕ್ಕಿ ದರ ಹೆಚ್ಚಾಗಿದೆ ಎಂಬ ಅವರ ಹೇಳಿಕೆ ಕೇಂದ್ರವೇ ಇಷ್ಟಕ್ಕೆಲ್ಲಾ ನೇರ ಹೊಣೆ ಎಂಬುದನ್ನೂ ಸ್ಪಷ್ಟ ಪಡಿಸಿದಂತೆ ಇತ್ತು.
ಸವಾಲಿಗೆ ಸಿಎಂ ಪ್ರತಿ ಸವಾಲು
ಅನ್ನಭಾಗ್ಯ ತಡವಾದಾಗ ಬಿಜೆಪಿ ಲೇವಡಿ ಮಾಡಿ ನಕ್ಕಿತ್ತು. ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ ಹಣ ಕೊಡಿ ಎಂಬ ಸವಾಲು ಹಾಕಿತ್ತು. ಸವಾಲಿಗೆ ಪ್ರತಿ ಸವಾಲು ಎಂಬಂತೆ ರಾಜ್ಯ ಸರ್ಕಾರ ಅಕ್ಕಿ ಮೊತ್ತದ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಾಕಲು ನಿರ್ಧರಿಸಿದೆ. ಆ ಮೂಲಕ ಬಿಜೆಪಿ ಬತ್ತಳಿಕೆ ಬರಿದು ಮಾಡಿದೆ.