ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ದ್ವೇಷದ ರಾಜಕಾರಣವನ್ನು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪೂರ್ವಸಭೆ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ತಪ್ಪು ಮಾಡಿದವರನ್ನು ರಕ್ಷಿಸಿ ಶಿಕ್ಷೆ ನೀಡಬಾರದೆಂದು ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರಶ್ನೆಯನ್ನು ಮಾಧ್ಯಮದವರು ಬಿಜೆಪಿಯವರಿಗೆ ಕೇಳಬೇಕು” ಎಂದರು.
“ಅಪರಾಧ ಮಾಡಿರುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿದೆ. ನಿರಪರಾಧಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ. ಟೀಕೆಗಳಿಗೆ, ಅನುಮಾನಗಳಿಗೆ ನಾನು ಉತ್ತರ ನೀಡುವುದಿಲ್ಲ” ಎಂದು ಹೇಳಿದರು.
ಸಿಎಂ ನವದೆಹಲಿ ಪ್ರವಾಸ
ಮುಖ್ಯಮಂತ್ರಿಗಳ ನವದೆಹಲಿ ಪ್ರವಾಸದ ಉದ್ದೇಶದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, “ನವದೆಹಲಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಪ್ರಮುಖ ಸಭೆ ನಡೆಸುವ ಸಾಧ್ಯತೆಯಿರುವುದರಿಂದ ಇಂದು ನವದೆಹಲಿಗೆ ಭೇಟಿ ನೀಡುತ್ತಿವೆ” ಎಂದು ತಿಳಿಸಿದರು.