ವಿಧಾನ ಮಂಡಲದ ಜಂಟಿ ಅಧಿವೇಶನ ಸೋಮವಾರ ಬೆಳಿಗ್ಗೆ 11ಕ್ಕೆ ಆರಂಭವಾಗಿದ್ದು, ಬಿಜೆಪಿ ಸದಸ್ಯರು ಮೊದಲ ದಿನವೇ ಕೇಸರಿ ಶಾಲು ಧರಿಸಿ ಕಲಾಪದಲ್ಲಿ ಭಾಗವಹಿಸಿದರು.
ರಾಜ್ಯದಲ್ಲಿ ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿಚಾರ ರಾಜ್ಯವ್ಯಾಪಿ ಹಬ್ಬಿ ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೆ ಅಧಿವೇಶನಕ್ಕೆ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ ಕಲಾಪದಲ್ಲಿ ಭಾಗವಹಿಸಿರುವುದು ಕುತೂಹಲ ಮೂಡಿಸಿದೆ.
ಈ ಮೂಲಕ ಕೆರಗೋಡಿನಲ್ಲಿ ಹನುಮ ಧ್ವಜವನ್ನು ಮತ್ತೆ ಹಾರಿಸಲು ಬಿಜೆಪಿ ನಾಯಕರು ಪಣತೊಟ್ಟಿದ್ದಾರೆ ಎನ್ನಲಾಗಿದೆ. ಇದರ ಪ್ರತೀಕವೆಂಬಂತೆ ಬಿಜೆಪಿ ಶಾಸಕರು ಅಧಿವೇಶನಕ್ಕೆ ಕೇಸರಿ ಶಾಲು ಧರಿಸಿಕೊಂಡು ಬಂದಿದ್ದಾರೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಬೆಳಿಗ್ಗೆ 11ಕ್ಕೆ ಸರಿಯಾಗಿ ವಿಧಾನಸಭೆ ಆಗಮಿಸಿದರು. ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ ಮತ್ತಿತರರು ರಾಜ್ಯಪಾಲರನ್ನು ಸ್ವಾಗತಿಸಿದರು.
ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡಿದರು. ಹತ್ತು ದಿನಗಳ ಕಾಲ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 16 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ.