ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಕಾರಣಕ್ಕೆ ಬಿಜೆಪಿ ಹೊಸ ನಾಯಕರು ರೈತರು, ಸಾಲಮನ್ನಾ ವಿಷಯದಲ್ಲಿ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ್ದಾರೆ.
ಸೋಮವಾರ ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿನ ನನ್ನ ಮಾತನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಚುನಾವಣೆ ಗೆಲ್ಲುವ ಕುರಿತು ಪಕ್ಷ ಬಿಜೆಪಿ ಹೊಸ ನಾಯಕರಿಗೆ ನೀಡಿರುವ ಗುರಿ ಗೆಲ್ಲುವುದಕ್ಕಾಗಿ ನನ್ನ ಹೇಳಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ದೇಶದಲ್ಲಿ ಈ ಹಿಂದೆ ಭೀಕರ ಬರ ಆವರಿಸಿದ್ದಾಗ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ದೇಶದ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ರಾಜ್ಯ ಸರ್ಕಾರ ಬರದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಲಿ ಎಂದು ಬಯಸುವ ಬಿಜೆಪಿ ನಾಯಕರು, ಕೇಂದ್ರದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿದೆ, ದೇಶದ 14 ರಾಜ್ಯಗಳಲ್ಲಿ ಭೀಕರ ಬರ ಆವರಿಸಿದ್ದು, ಸಾಲಮನ್ನಾ ಮಾಡಿಸಲಿ” ಎಂದು ಸವಾಲು ಹಾಕಿದರು.
“ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಎಪಿಎಂಸಿ ಕಾನೂನು ಜಾರಿಗೆ ತಂದುದನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ತಮ್ಮ ಇಂಥ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.