ಜಗದೀಶ್ ಶೆಟ್ಟರ್ ಅವರಂತಹ ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿಗಳೊಬ್ಬರು ತರಾತುರಿಯಲ್ಲಿ ಪುನಃ ಬಿಜೆಪಿಗೆ ಹಿಂದಿರುಗಿ ಹೋಗಿರುವುದು ಅವರಿಗೆ ಶೋಭೆಯಲ್ಲ. ಈ ಬಗ್ಗೆ ಅವರು ಯೋಚಿಸಬೇಕಿತ್ತು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.
ಗುರುವಾರ ಬೆಳಿಗ್ಗೆ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಬಿಜೆಪಿಯಿಂದ ಅಪಮಾನಿತರಾದಾಗ ಕಾಂಗ್ರೆಸ್ ಅವರನ್ನು ಚೆನ್ನಾಗಿ ನಡೆಸಿಕೊಂಡಿತ್ತು. ಕಾಂಗ್ರೆಸ್ಸಿನಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿತ್ತು. ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಪಕ್ಷದಿಂದ ಧಾರವಾಡ ಕ್ಷೇತ್ರದ ಟಿಕೆಟ್ ಕೊಡಬೇಕೆಂಬ ಆಲೋಚನೆ ಇತ್ತು. ಬಿಜೆಪಿ ಅವರ ಮೇಲೆ ಒತ್ತಡ ಹೇರಿತೋ, ಆಮಿಷ ಒಡ್ಡಿತೋ ಗೊತ್ತಿಲ್ಲ” ಎಂದರು.
“ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ಟನ್ನೇ ನಿರಾಕರಿಸಿತ್ತು. ಆಗ ನಾವು ಅವರನ್ನು ಕಾಂಗ್ರೆಸ್ಸಿಗೆ ಕರೆತಂದೆವು. ಚುನಾವಣೆಯಲ್ಲಿ ಸೋತರೂ ಅವರನ್ನು ಎಂಎಲ್ಸಿ ಮಾಡಿದ್ದೆವು. ಪಕ್ಷದ ವೇದಿಕೆಗಳಲ್ಲಿ ಆದ್ಯತೆ ಕೊಟ್ಟಿದ್ದೆವು. ಅವರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಿದ್ದೆವು. ಆದರೂ ಶೆಟ್ಟರ್ ಹೀಗೇಕೆ ಮಾಡಿದರೋ ಗೊತ್ತಿಲ್ಲ” ಎಂದು ಅವರು ಬೇಸರ ಹೊರಹಾಕಿದರು.
“ಶೆಟ್ಟರ್ ಅವರು ಮರಳಿ ಬಿಜೆಪಿಗೆ ಹೋಗುತ್ತಾರೆಂದು ಸುದ್ದಿ ಮಾಧ್ಯಮಗಳಲ್ಲೇ ಬರುತ್ತಲೇ ಇತ್ತು. ಆದರೆ ನಾವು ಅದನ್ನು ನಂಬಿರಲಿಲ್ಲ. ಈಗ ಅವರು ನಮ್ಮ ಪಕ್ಷವನ್ನು ತೊರೆದಿರುವುದು ಆಶ್ಚರ್ಯಕರ ಮತ್ತು ಅನಿರೀಕ್ಷಿತ. ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರ ಮತಗಳ ಮೇಲೆ ಕಣ್ಣಿಟ್ಟುಕೊಂಡು ಬಿಜೆಪಿ ನಾಯಕರು ಹೀಗೆ ಗಾಳ ಹಾಕಿದ್ದಾರೆ ಎನಿಸುತ್ತದೆ” ಎಂದು ಪಾಟೀಲ ವಿಶ್ಲೇಷಿಸಿದರು.
“ಇದೇನೇ ಇದ್ದರೂ ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚಿನ ಸೀಟುಗಳನ್ನು ಗೆಲ್ಲುತ್ತೇವೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರಿಗೆ ಗೌರವವಿದೆ. ಶೆಟ್ಟರ್ ನಿರ್ಗಮನದ ಹಿನ್ನೆಲೆಯಲ್ಲಿ ಲಿಂಗಾಯತರನ್ನು ಡಿಸಿಎಂ ಮಾಡಬೇಕೋ, ಬೇಡವೋ ಎನ್ನುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಈ ಬಗ್ಗೆ ಪಕ್ಷದ ನಾಯಕರಿಗೆ ಏನು ಹೇಳಬೇಕೋ ಅದನ್ನು ನಾನೂ ನಾಲ್ಕು ಗೋಡೆಗಳ ಮಧ್ಯೆ ಹೇಳಿದ್ದೇನೆ” ಎಂದರು.