ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ. ಇದೊಂದು ಜಾಹೀರಾತುಗಳಿಂದ ನಡೆಯುತ್ತಿರುವ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಲಾದ ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಒಂದು ಕಡೆ ಬರಗಾಲ, ಕೇಂದ್ರ ಸರ್ಕಾರದಿಂದ ಹಣ ಬರುತ್ತಿಲ್ಲ ಎನ್ನುವ ಸರ್ಕಾರ ಇಲ್ಲಿ ನೋಡಿದರೆ ಗಂಜಿ ಕೇಂದ್ರಗಳನ್ನು ಸೃಷ್ಟಿ ಮಾಡಿ 90 ಮಂದಿಗೆ ಸಂಪುಟ ದರ್ಜೆ ನೀಡಿದೆ. ಅದರಲ್ಲಿ 77 ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ನೀಡಿದ್ದರೆ, ಸಿಎಂ ಕಚೇರಿಯಲ್ಲಿ 9 ಜನರಿಗೆ ಸಂಪುಟ ಭಾಗ್ಯ ಕರುಣಿಸಲಾಗಿದೆ. ರಾಜ್ಯದ ಆಡಳಿತಾತ್ಮಕ ಇತಿಹಾಸದಲ್ಲಿಯೂ ಇಷ್ಟು ಬೇಕಾಬಿಟ್ಟಿಯಾಗಿ ಅಧಿಕಾರ ಹಂಚಿಕೆ ಮಾಡಿ ಖಜಾನೆಗೆ ನಷ್ಟ ಉಂಟು ಮಾಡಲಾಗಿದೆ” ಎಂದು ದೂರಿದರು.
“ಕ್ಯಾಬಿನೆಟ್ ದರ್ಜೆ ಅದಕ್ಕೊಂದು ಲೆಕ್ಕ ಬೇಡವೇ? ಉಪ ಮುಖ್ಯಮಂತ್ರಿ ಅವರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೂ ಕ್ಯಾಬಿನೆಟ್ ದರ್ಜೆ! ಕಲೆಕ್ಷನ್ ಮಾಡಿಕೊಡುವ ಅಸಾಮಿಗೂ ಕ್ಯಾಬಿನೆಟ್ ದರ್ಜೆ!! ಕರ್ನಾಟಕ ಹಣಕಾಸು ಸಂಸ್ಥೆ (KSFC) ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡುತ್ತಿರುವುದು ಉಂಟಾ” ಎಂದು ಸರಕಾರವನ್ನು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.
“ಬರಕ್ಕೆ ತುತ್ತಾದ ರೈತರಿಗೆ ಪರಿಹಾರ ಕೊಡಲು ಇವರಲ್ಲಿ ಹಣವಿಲ್ಲ. ಆದರೆ, ಸಂಪುಟ ದರ್ಜೆ ಭಾಗ್ಯಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದನ್ನು ಏನೆಂದು ಕರೆಯಬೇಕು? ಎಂದು ಕಿಡಿಕಾರಿದರು.
“ವಿಶೇಷವಾಗಿ ಬೆಂಗಳೂರಿನಲ್ಲಿ ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆಂದು ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಟ್ಟಿದ್ದನ್ನು ನೋಡಿದ್ದೇವೆ. ಸಂಗಮದಿಂದ ಮೇಕೆದಾಟು ಪಾದಾಯಾತ್ರೆ ಮಾಡಿದ್ದನ್ನೂ ನೋಡಿದ್ದೇವೆ. ಆ ಮೇಕೆದಾಟು ಕಳೆದ 8 ತಿಂಗಳಲ್ಲಿ ಎಲ್ಲಿ ಶುರುವಾಯಿತೋ ಈಗಲೂ ಅಲ್ಲಿಯೇ ನಿಂತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಏನಾಯಿತು, ಎಲ್ಲಿಗೆ ಬಂತು? ಅಭಿವೃದ್ಧಿ ಯೋಜನೆಗಳಿಗೆ ಹಣ ಕೇಳಲೇಬೇಡಿ” ಎಂದರು.
ಗ್ಯಾರಂಟಿಗಳ ಬಗ್ಗೆ ಅಧ್ಯಯನವಂತೆ
ಗ್ಯಾರಂಟಿಗಳ ಬಗ್ಗೆ ದೇಶ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರಂತೆ. ಅಧ್ಯಯನ ಮಾಡುವವರಿಗೆ ವಾಸ್ತವ ಚಿತ್ರಣ ಗೊತ್ತಿದ್ದಂತೆ ಇಲ್ಲ. ಹಾವೇರಿ ಜಿಲ್ಲೆಯ ತಾಯಿ ಮಗ ಕೆಲಸಕ್ಕಾಗಿ ಗೋವಾಕ್ಕೆ ಗುಳೆ ಹೋದರು. ಅಲ್ಲಿಯೂ ಕೆಲಸ ಸಿಗಲಿಲ್ಲ ಎಂದು ರೈಲಿನಲ್ಲಿ ಊರಿಗೆ ವಾಪಸ್ ಬರುವಾಗ ಟಿಕೆಟ್ ಇರಲಿಲ್ಲ ರೈಲಿನ ಟಿಕೆಟ್ ತಪಾಸಣೆ ಮಾಡುವವನು ಅವರಿಬ್ಬರನ್ನು ಧಾರವಾಡ ಜಿಲ್ಲೆಯ ಆಳ್ನಾವರದಲ್ಲಿ ರೈಲಿನಿಂದ ಇಳಿಸಿಬಿಟ್ಟ. ಮೂರು ದಿನ ಉಪವಾಸ ಬಿದ್ದ ಆ ತಾಯಿಮಗ ಸುಸ್ತಾಗಿದ್ದರು. ತಾಯಿಗಾಗಿ ಅನ್ನ ಹುಡುಕಲು ಹೊರಟ ಮಗನಿಗೆ ಅನ್ನವೂ ಸಿಗಲಿಲ್ಲ, ಕೆಲಸವೂ ಧಕ್ಕಲಿಲ್ಲ. ಕೊನೆಗೆ ಅದೇ ಊರಿನಲ್ಲಿ ಆ ಯುವಕ ಆತ್ಮಹತ್ಯೆ ಮಾಡಿಕೊಂಡ” ಎಂದರು.
ಬಸ್ಸಿನಲ್ಲಿ ಜನರನ್ನು ಕರೆತಂದು ಜನತಾದರ್ಶನ
ನಾನು ಸಿಎಂ ಆಗಿದ್ದಾಗ ಜನತಾದರ್ಶನ ಮಾಡಿದ್ದೆ. ಅದಕ್ಕೆ ಬಸ್ ನಲ್ಲಿ ಜನರನ್ನು ಕರೆತಂದಿರಲಿಲ್ಲ. ರಾತ್ರಿ ಮೂರು ಗಂಟೆಗೆ ಬಂದು ಜನ ಕಾಯುತ್ತಿದ್ದರು. ಬೆಳಗ್ಗೆ 9 ಗಂಟೆಯಿಂದ ಮಧ್ಯರಾತ್ರಿವರೆಗೂ ಆ ಜನರ ಅಹವಾಲು ಕೇಳಿ ಸ್ಥಳದಲ್ಲಿಯೇ ಅವರ ಸಂಕಷ್ಟ ನಿವಾರಣೆ ಮಾಡಿದ್ದೇನೆ. ಆದರೆ, ನಾನೆಂದೂ ಜಾಹೀರಾತು ಕೊಟ್ಟುಕೊಂಡು ಪ್ರಚಾರ ಪಡೆದುಕೊಳ್ಳಲಿಲ್ಲ. ದಿನಕ್ಕೆ 100 ಸುಳ್ಳು ಹೇಳಿಕೊಂಡು ಓಡಾಡುವ ಇವರು, ರಾಜ್ಯಪಾಲರಿಂದಲೂ ಸುಳ್ಳು ಭಾಷಣ ಮಾಡಿಸಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಾನು ಯಾವ ಗ್ಯಾರಂಟಿಗಳನ್ನು ತಪ್ಪು ಎಂದು ಹೇಳುವುದಿಲ್ಲ. ಗ್ಯಾರಂಟಿಗಳ ವಿಚಾರದಲ್ಲಿ ನನಗೆ ಯಾವ ತಕಾರಾರೂ ಇಲ್ಲ. ಬೇಕಾದರೆ ಇನ್ನು ಐದು ಗ್ಯಾರಂಟಿ ಜಾರಿ ಮಾಡಿ, ಅಭಿನಂದಿಸ್ತಿನಿ. ಆದರೆ, ಈಗಾಗಲೇ ಜಾರಿ ಮಾಡಿರುವ ಗ್ಯಾರಂಟಿಗಳು ಏನಾಗಿವೆ? ಬೆಂಗಳೂರಿನ ಭಾಗವೇ ಆಗಿರುವ ದೇವನಹಳ್ಳಿಯಲ್ಲಿ ಶಾಲಾ ಮಕ್ಕಳಿಗೆ ಬಸ್ ಇಲ್ಲ. ಮಕ್ಕಳು ಶಾಲೆಗೆ ದಿನವೂ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಉದ್ಯೋಗ ಕೊಡುತ್ತೇವೆ ಎಂದು ಜಾಹೀರಾತು ಕೊಡುತ್ತಲೇ ಇದ್ದಾರೆ. ಅಷ್ಟು ಜನ ನೇಮಕ, ಇಷ್ಟು ಜನ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಬರೀ ಪ್ರಸ್ತಾವನೆ ಸಲ್ಲಿಸುವುದರಲ್ಲಿಯೇ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ರಾಜ್ಯಪಾಲರ ಭಾಷಣದಲ್ಲಿ ಕಾಂತರಾಜು ವರದಿ ಸದ್ದೇ ಇಲ್ಲ
ಸಂವಿಧಾನವನ್ನು ರಕ್ಷಣೆ ಮಾಡಿದರೆ, ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತದೆ. ಸ್ಲೋಗನ್ ಚೆನ್ನಾಗಿದೆ. ಆದರೆ, ನಾನು ಜಾತ್ಯತೀತ, ಧರ್ಮಾತೀತ ಎಂದು ಡಂಗುರ ಹೊಡೆದುಕೊಂಡು ತಿರುಗಾಡುವ ಈ ಮುಖ್ಯಮಂತ್ರಿ, ಧರ್ಮ – ಜಾತಿಗಳ ಹೆಸರಿನಲ್ಲಿ ಎಷ್ಟು ಸಮಾವೇಶಗಳನ್ನು ಮಾಡಿಲ್ಲ? ಬೇಕಾದರೆ ದಾಖಲೆ ತೆಗೆಯೋಣ ಎಂದ ಅವರು; ಕಾಂತರಾಜ್ ವರದಿಯ ಸದ್ದೇ ಇಲ್ಲವಲ್ಲ ಈ ಭಾಷಣದಲ್ಲಿ? ವರದಿ ಸ್ವೀಕಾರ ಮಾಡಿ ಜಾರಿ ಮಾಡುತ್ತೇನೆ ಎಂದು ಚಿತ್ರದುರ್ಗದಲ್ಲಿ ಅಬ್ಬರ ಮಾಡಿದ್ದರಲ್ಲ.. ಈ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಚಕಾರವೇ ಇಲ್ಲ.ಜಯಪ್ರಕಾಶ್ ಹೆಗ್ಡೆ ಅವರ ಹತ್ತಿರ ಏನ್ ಬರುಸ್ತಿದ್ದಿರಾ ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕುಟುಕಿದರು.