ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಕಗ್ಗತ್ತಲ ಕಾಲದಲ್ಲಿ ನ್ಯಾಯದ ಬೆಳಕಿನ ಬಾಗಿಲು ತೆರೆದಂತೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿಚಾರವಾಗಿ ಎಕ್ಸ್ ತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಅತ್ಯಾಚಾರಿಗಳ ಪರ ವಕಲಾತ್ತು ವಹಿಸಿದ್ದ ಗುಜರಾತಿನ ಪ್ರಭುತ್ವಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಹೆಣ್ತನದ ಆತ್ಮಾಭಿಮಾನ ಹಾಗೂ ನ್ಯಾಯಂಗದ ನಂಬಿಕೆ ಉಳಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ” ಎಂದು ತಿಳಿಸಿದ್ದಾರೆ.
ಏನಿದು ತೀರ್ಪು?
2002ರ ಗುಜರಾತ್ ಗಲಭೆಯಲ್ಲಿ ಸಂಭವಿಸಿದ ಬಿಲ್ಕಿಸ್ ಬಾನೋ ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪರಾಧಿಗಳ ಅವಧಿಗೆ ಮುನ್ನ ಬಿಡುಗಡೆಗೆ ಅವಕಾಶ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 11 ಜನರನ್ನು ಅಕಾಲಿಕವಾಗಿ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಬಳಿಕ ಈ ತೀರ್ಪು ನೀಡಲಾಗಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಹನ್ನೊಂದು ಅಪರಾಧಿಗಳು ಎರಡು ವಾರಗಳಲ್ಲಿ ಜೈಲು ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಮತ್ತು ಜೈಲಿನಲ್ಲಿಯೇ ಮುಂದುವರಿಯಬೇಕು ಎಂದು ಹೇಳಿದೆ. ಇದೇ ವೇಳೆ 2022 ಆಗಸ್ಟ್ ನಲ್ಲಿ ದೋಷಿಗಳ ಬಿಡುಗಡೆಗೆ ನಿರ್ಧಾರ ಕೈಗೊಂಡ ಪ್ರಕ್ರಿಯೆಗಳನ್ನು ಒಳಗೊಂಡ ಮೂಲ ಕಡತಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.