Homeಕರ್ನಾಟಕರಾಜ್ಯಪಾಲರಿಂದ ಪಕ್ಷಪಾತಿ ನಡೆ; ಬಿಜೆಪಿ ಜೊತೆ ಎಚ್‌ಡಿಕೆ ಮೈತ್ರಿ ಅಸಲಿ ಉದ್ದೇಶ ಜಗಜ್ಜಾಹೀರು!

ರಾಜ್ಯಪಾಲರಿಂದ ಪಕ್ಷಪಾತಿ ನಡೆ; ಬಿಜೆಪಿ ಜೊತೆ ಎಚ್‌ಡಿಕೆ ಮೈತ್ರಿ ಅಸಲಿ ಉದ್ದೇಶ ಜಗಜ್ಜಾಹೀರು!

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಲೋಕಾಯುಕ್ತ ಸಲ್ಲಿಸಿರುವ ಮನವಿಯನ್ನು ರಾಜ್ಯಪಾಲರು 10 ತಿಂಗಳಿನಿಂದ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎಂದು ವರದಿಯಾಗಿದೆ.

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಟಿ ಜೆ ಅಬ್ರಹಾಂ ಅವರು ಇದೇ ರಾಜ್ಯಪಾಲರಿಗೆ ಜುಲೈ 26ರಂದು ಅರ್ಜಿ ಸಲ್ಲಿಸಿದ್ದರು. ಮರುದಿನ, ಅಂದರೆ ಜುಲೈ 27ರಂದೇ ಈ ಸಂಬಂಧ ವಿವರಣೆ ಕೋರಿ ರಾಜ್ಯಪಾಲರು ಸಿಎಂಗೆ ನೋಟಿಸ್ ಜಾರಿ ಮಾಡಿದ್ದರು.

ಆದರೆ, ಗಣಿ ಅಕ್ರಮ ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ಎಸ್‌ಐಟಿ, ಹೆಚ್‌.ಡಿ ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ 10 ತಿಂಗಳ ಹಿಂದೆಯೇ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಆ ವಿಚಾರದಲ್ಲಿ ರಾಜ್ಯಪಾಲರು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಎಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಅಂದರೆ ಅಕ್ಟೋಬರ್ 6, 2007ರಂದು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಭಾವಿಹಳ್ಳಿ, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಜಾಗವನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಎಂಬ ಬೋಗಸ್‌ ಸಂಸ್ಥೆಗೆ ಗಣಿಗಾರಿಕೆಗೆ ಅಕ್ರಮವಾಗಿ ಗುತ್ತಿಗೆಗೆ ನೀಡಿದ ಆರೋಪ ಅವರ ಮೇಲಿದೆ.

ಗುತ್ತಿಗೆ ನೀಡುವಾಗ ಮಿನರಲ್ಸ್‌ ಕನ್ಸಿಷನ್‌ ನಿಯಮಗಳ, ನಿಯಮ 59 (2)ನ್ನು ಉಲ್ಲಂಘಿಸಿ ಕುಮಾರಸ್ವಾಮಿಯವರು ಮಂಜೂರು ಮಾಡಿದ್ದರು ಎಂದು ಹೇಳಲಾಗಿತ್ತು. ಈ ಅಕ್ರಮದ ಕುರಿತಾಗಿ ಎಫ್‌ಐಆರ್‌ ದಾಖಲಾಗಿ ಲೋಕಾಯುಕ್ತದ ಎಸ್‌ಐಟಿಯು ತನಿಖೆಯನ್ನು ಕೈಗೆತ್ತಿಕೊಂಡಿತ್ತು.

ತನಿಖೆ ಪೂರ್ಣಗೊಂಡ ನಂತರ ಎಚ್‌ ಡಿ ಕುಮಾರಸ್ವಾಮಿ ತಪ್ಪೆಸಗಿದ್ದಾರೆ ಎಂದು ಲೋಕಾಯುಕ್ತಕ್ಕೆ ಮನವರಿಕೆಯಾಗಿ ಚಾರ್ಚ್‌ಶೀಟ್‌ ಹಾಕಲಾಗಿತ್ತು. ನಂತರ ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರು ರಾಜ್ಯಪಾಲರಿಗೆ ಪತ್ರ ಕಳಿಸಿದ್ದರು. ಈ ಸಂಬಂಧ ರಾಜ್ಯಪಾಲರು ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ವರದಿ ಹೇಳಿದೆ.

ಸಿಎಂ ಸಿದ್ದರಾಮಯ್ಯ ವಿರುದ್ದದ ಅರ್ಜಿಗೆ ಸಂಬಂಧಿಸಿದಂತೆ ತಕ್ಷಣ ನೋಟಿಸ್ ಜಾರಿಗೊಳಿಸಿದ ರಾಜ್ಯಪಾಲರು, ಕುಮಾರಸ್ವಾಮಿ ವಿಚಾರದಲ್ಲಿ ಏಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ? ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ಅಲ್ಲದೆ, ಕುಮಾರಸ್ವಾಮಿಯವರು ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಭಾರೀ ಕೈಗಾರಿಕೆಗಳು ಮತ್ತು ಉಕ್ಕು ಖಾತೆ ಸಚಿವರಾಗಿದ್ದಾರೆ.

“ಕರ್ನಾಟಕದ ಭೂಮಿ ಭಗೆಯುವುದು ಕುಮಾರಸ್ವಾಮಿಯವರ ಅತ್ಯಂತ ಆಸಕ್ತಿದಾಯಕ ವಿಷಯ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕೇವಲ ಅಧಿಕಾರ ಹಪಹಪಿತನಕ್ಕೆ ಮಾತ್ರವಲ್ಲ, ಅಧಿಕಾರ ಬಳಸಿ ಗಣಿಯಲ್ಲಿ ಲೂಟಿಗಾರಿಕೆ ನಡೆಸುವುದು ಅವರ ಪ್ಲಾನ್ ಆಗಿತ್ತು ಎನ್ನುವುದು ಈಗ ಜಗಜ್ಜಾಹೀರಾಗಿದೆ” ಎಂದು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments