ವಿಮಾನ ಹೊರಡುವುದಕ್ಕೂ ಕೆಲವೇ ಕ್ಷಣಗಳ ಮುನ್ನ ತಾನು ಉಗ್ರಗಾಮಿ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಬೆದರಿಕೆ ಹಾಕಿದ್ದ ಖತರ್ನಾಕ್ ಖದೀಮನನ್ನು ಕೆಂಪೇಗೌಡ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಂಪನಿಯ ಉದ್ಯೋಗಿ ಆದರ್ಶ್ ಕುಮಾರ್ ಸಿಂಗ್ ಬಂಧಿತ ಆರೋಪಿ. ಕಳೆದ ಫೆಬ್ರವರಿ 17ರಂದು ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ ಆರೋಪಿಯು ವಿಮಾನ ಏರಲು ತೆರಳಿದ್ದ ಆತ ಕೊನೇ ಕ್ಷಣದಲ್ಲಿ ಹಿಂತಿರುಗಿ ವಾಪಸ್ ತೆರಳಲು ಮುಂದಾಗಿದ್ದ.
ಈ ಬಗ್ಗೆ ಏರ್ ಇಂಡಿಯಾ ಸಿಬ್ಬಂದಿ ಭದ್ರತಾ ಪಡೆಗೆ ಮಾಹಿತಿ ನೀಡಿದ್ದರು. ಇದೇ ವೇಳೆ, ವಿಮಾನ ಹತ್ತದೆ ಏಕೆ ವಾಪಸ್ ತೆರಳುತ್ತಿದ್ದೀರಿ ಎಂದು ವಿಮಾನ ನಿಲ್ದಾಣ ಭದ್ರತಾ ಪಡೆ ಸಿಬ್ಬಂದಿ ಪ್ರಶ್ನಿಸಿದ್ದಾರೆ.
ಭದ್ರತಾ ಸಿಬ್ಬಂದಿಯ ಪ್ರಶ್ನೆಗೆ ಆದರ್ಶ್ ಕುಮಾರ್ ಸಿಂಗ್, ‘ನಾನು ಭಯೋತ್ಪಾದಕರ ಗುಂಪಿಗೆ ಸೇರಿದವನು. ನಾನು ಲಖನೌಗೆ ತೆರಳಲ್ಲ’ ಎಂದು ಬೆದರಿಕೆ ಹಾಕಿದ್ದ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದು,ಆತನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಬ್ಯಾಗ್ನಲ್ಲಿ ಬಾಂಬ್ ಇದೆ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ತೆರಳುವ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ಬ್ಯಾಗ್ನಲ್ಲಿ ಬಾಂಬ್ ಇದೆ ಎಂಬರ್ಥದಲ್ಲಿ ನೀಡಿದ್ದ ಹೇಳಿಕೆ ಕಳೆದ ತಿಂಗಳು ಸಮಸ್ಯೆಗೆ ಕಾರಣವಾಗಿತ್ತು. ಬಳಿಕ ಆರೋಪಿಯನ್ನು ಕೆಂಪೇಗೌಡ ಏರ್ಪೋರ್ಟ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿ ಸಜು ಕೆ ಕುಮಾರನ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂತಹ ಕೆಲವು ಘಟನೆಗಳು ಇತ್ತೀಚೆಗೆ ಪದೇಪದೆ ವರದಿಯಾಗುತ್ತಿರುವುದು ಭದ್ರತಾ ಪಡೆಗಳ ತಲೆನೋವಿಗೆ ಕಾರಣವಾಗಿದೆ. ಹುಸಿ ಬಾಂಬ್ ದಾಳಿ ಕರೆಗಳು, ದಾಳಿ ಬೆದರಿಕೆಗಳು ಹಾಗೂ ಹುಸಿ ಬೆದರಿಕೆಗಳು ಭದ್ರತಾ ಪಡೆಗಳ ನಿದ್ದೆಗೆಡಿಸಿವೆ.