ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಭಾರತ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಯೋಜಿಸಿರುವ ಟೆಕ್ ಶೃಂಗಸಭೆ-2023, ಜಾಗತಿಕ ನಾವೀನ್ಯತೆಯ ಪ್ರಮುಖ ಸ್ಥಳವಾದ ಬೆಂಗಳೂರು ನಗರದಲ್ಲಿ ನಡೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳಿಗೆ ಈ ಬಗ್ಗೆ ವಿವರಗಳನ್ನು ನೀಡಿದ ಸಚಿವರು, ಬಹು ನಿರೀಕ್ಷಿತ ಟೆಕ್ ಶೃಂಗಸಭೆಯ ಆಶಯಗಳನ್ನು ಬಿಚ್ಚಿಟ್ಟರು. ಈ ಸಮಾವೇಶ ಗಡಿಗಳನ್ನು ಮೀರಿ ಜಾಗತಿಕ ಸಂಪರ್ಕವನ್ನು ಬೆಸೆಯಲಿದೆ ಎಂದು ಬಣ್ಣಿಸಿದರು.
“ಬ್ರೇಕಿಂಗ್ ಬೌಂಡರೀಸ್’, ಈ ವರ್ಷದ ಥೀಮ್ ಆಗಿದ್ದು, ವಿಶ್ವದ 30 ದೇಶಗಳ ಟೆಕ್ ನಾಯಕರು, ಸ್ಟಾರ್ಟ್‌ಪ್‌ಗಳು, ಹೂಡಿಕೆದಾರರು ಮತ್ತು ಸಂಶೋಧನಾ ಪ್ರಯೋಗಾಲಯಗಳ ಕ್ರಿಯಾತ್ಮಕ ಒಮ್ಮುಖಕ್ಕೆ ವೇದಿಕೆಯನ್ನು ಸಜ್ಜುಗೊಂಡಿದೆ. 26ನೇ ಬೆಂಗಳೂರು ಟೆಕ್ ಶೃಂಗಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ತಿಂಗಳ 29ರಂದು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಎಂ ಬಿ ಪಾಟೀಲ್, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ. ವಂದಿತಾ ಶರ್ಮಾ, ಎಲೆಕ್ಟ್ರಾನಿಕ್ಸ್, ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಗಳಾದ ಡಾ.ಏಕ್ ರೂಪ್ ಕೌರ್, ಎಸ್.ಟಿ.ಪಿ.ಐ ನಿರ್ದೇಶಕರಾದ ಶೈಲೇಂದ್ರ ತ್ಯಾಗಿ ಮತ್ತು ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ದರ್ಶನ್ ಹೆಚ್.ವಿ ಭಾಗವಹಿಸುವರು” ಎಂದು ವಿವರಿಸಿದರು.
“ಉದ್ಘಾಟನಾ ಕಾರ್ಯಕ್ರಮವು ಕಝಾಕಿಸ್ತಾನ್ ರಾಷ್ಟ್ರದ ಡಿಜಿಟಲ್ ಅಭಿವೃದ್ಧಿ, ನಾವೀನ್ಯತೆಗಳು ಮತ್ತು ಏರೋಸ್ಪೇಸ್ ಇಂಡಸ್ಟ್ರಿ ಸಚಿವರಾದ ಬಗ್ದತ್ ಮುಸ್ಸಿನ್ ಹಾಗೂ ಮಾರ್ಕ್ ಪೇಪರ್ಮಾಸ್ಟರ್, EVP & CTO AMD ಅವರಂತಹ ಅಂತರರಾಷ್ಟ್ರೀಯ ಗಣ್ಯರನ್ನು ಒಳಗೊಂಡಿರುತ್ತದೆ; ಫಿನ್ಲ್ಯಾಂಡ್ ದೇಶದ ವಿಜ್ಞಾನ ಮತ್ತು ಸಂಸ್ಕೃತಿ ಸಚಿವರಾದ ಶ್ರೀಮತಿ ಸಾರಿ ಮುಲ್ತಾಲಾ ಮತ್ತು ಜರ್ಮನಿಯ ಡಿಜಿಟಲ್ ವ್ಯವಹಾರಗಳು ಮತ್ತು ಸಾರಿಗೆ ಸಚಿವರಾದ ವೋಲ್ಕರ್ ವಿಸ್ಸಿಂಗ್ ಅವರ ಧ್ವನಿಮುದ್ರಿಸಲಾದ ಸಂದೇಶ ಹೊಂದಿರುತ್ತದೆ” ಎಂದರು.
ಈ ಸಮಾವೇಶದಲ್ಲಿ ವಿಪ್ರೋ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾದ ರಿಶಾದ್ ಪ್ರೇಮ್‌ಜಿ ಹಾಗೂ ಭಾರತೀಯ ಉದ್ಯಮದ ಪ್ರಮುಖ ವ್ಯಕ್ತಿಗಳು ಭಾಗವಹಿಸುತ್ತಾರೆ. ಡಾ. ಕಿರಣ್ ಮಜುಂದಾರ್-ಶಾ, ಅಧ್ಯಕ್ಷರು, ವಿಷನ್ ಗ್ರೂಪ್ ಆನ್ ಬಯೋಟೆಕ್ನಾಲಜಿ, ಕರ್ನಾಟಕ, ಕ್ರಿಸ್ ಗೋಪಾಲಕೃಷ್ಣನ್, ಅಧ್ಯಕ್ಷರು, ವಿಷನ್ ಗ್ರೂಪ್ ಆನ್ ಐಟಿ, ಮತ್ತು ಇನ್ಫೋಸಿಸ್ ಸಂಸ್ಥೆಯ ಸಹ-ಸಂಸ್ಥಾಪಕರು; ಪ್ರಶಾಂತ್ ಪ್ರಕಾಶ್, ಅಧ್ಯಕ್ಷರು, ವಿಷನ್ ಗ್ರೂಪ್ ಆನ್ ಸ್ಟಾರ್ಟಪ್ಸ್, ಕರ್ನಾಟಕ ಮತ್ತು ಆಕ್ಸೆಲ್ ಪಾರ್ಟ್ನರ್ಸ್ ಇಂಡಿಯಾದ ಸ್ಥಾಪಕ ಪಾಲುದಾರ; ಶ್ರೀಮತಿ ನಿವೃತಿ ರೈ, ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಇನ್ವೆಸ್ಟ್ ಇಂಡಿಯಾದ ಸಿಇಒ; ಬಿ.ವಿ.ನಾಯ್ಡು, ಅಧ್ಯಕ್ಷರು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್; ಮತ್ತು ಅರವಿಂದ್ ಕುಮಾರ್, ಭಾರತೀಯ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಮಹಾನಿರ್ದೇಶಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾಗುತ್ತಾರೆ” ಎಂದರು.
“ಎನ್.ಆರ್. Zerodha ಸಹ-ಸಂಸ್ಥಾಪಕ ಶ್ರೀ ನಿಖಿಲ್ ಕಾಮತ್ ಅವರೊಂದಿಗೆ ಸಂವಾದದಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಭಾಗವಹಿಸಿ, ತಮ್ಮ ಸಾಹಸ ಕಥೆಗಳ ಪಯಣನ್ನು ಅನಾವರಣಗೊಳಿಸುವರು” ಎಂದು ಹೇಳಿದರು.
ಹಸಿರು ಬಿಟಿಎಸ್
“ಈ ವರ್ಷ, ಬೆಂಗಳೂರು ಟೆಕ್ ಶೃಂಗಸಭೆಯು ಮುಂಬರುವ ವರ್ಷಗಳಲ್ಲಿ ಪರಿಸರ ಹಾನಿಯಾಗದಂತೆ ನಿವ್ವಳ ಶೂನ್ಯವನ್ನು ಸಾಧಿಸುವತ್ತ ಮಹತ್ವದ ದಾಪುಗಾಲು ಹಾಕಿದೆ. ಈ ಮಹತ್ವಾಕಾಂಕ್ಷೆಯ ಗುರಿಯು ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಲು ಸಂಗ್ರಹಣೆಯಲ್ಲಿ ಪರಿಸರ ಪ್ರಜ್ಞೆಯ ಅಭ್ಯಾಸಗಳನ್ನು ಸಂಯೋಜಿಸುವುದು ಮತ್ತು ವಿವಿಧ ಮಧ್ಯಸ್ಥಗಾರರಿಗೆ ಸುಸ್ಥಿರತೆ ಸಲಹೆಯನ್ನು ನೀಡುವುದನ್ನು ಒಳಗೊಂಡಿರುತ್ತದೆ. ಇಂಗಾಲ, ನೀರು, ಶಕ್ತಿ, ತ್ಯಾಜ್ಯ, ಆಹಾರ, ಮತ್ತು ಅನುಭವದಂತಹ ಪ್ರಮುಖ ಆಧಾರ ಸ್ತಂಭಗಳ ಮೇಲೆ ಕೇಂದ್ರೀಕರಿಸುವುದು ಈ ಬಾರಿಯ ಶೃಂಗಸಭೆಯ ಸುಸ್ಥಿರತೆಯ ಬದ್ಧತೆಯನ್ನು ಒತ್ತಿಹೇಳುತ್ತದೆ. ಇದು ಭಾರತದಲ್ಲಿ ಮೊದಲ ಘಟನೆಯಾಗಲಿದೆ” ಎಂದರು.