ರಾಜ್ಯದಲ್ಲಿ ಮತ್ತು ದೇಶದಲ್ಲಿ ಕಾಂಗ್ರೆಸ್ ಕನ್ಫ್ಯೂಸ್ ಆಗಿದೆ. ರಾಮಮಂದಿರ ಆಗಬೇಕು ಅನ್ನೋದು ಇರಲಿಲ್ಲ. ಆಗುತ್ತೆ ಅನ್ನೋ ಕಲ್ಪನೆ ಇರಲಿಲ್ಲ. ಇಚ್ಛೆನೂ ಅವರಿಗೆ ಇರಲಿಲ್ಲ. ಹಾಗಾಗಿ ಒಂದು ರೀತಿಯ ಆತಂಕ ಹೊಟ್ಟೆ ಕಿಚ್ಚು ಆರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು.
ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಉದ್ಘಾಟನೆಗೆ ಹೋಗಬೇಕೋ ಹೋಗಬಾರದೋ ಅನ್ನೋದು ಕನ್ಫ್ಯೂಷನ್ ಕಾಂಗ್ರೆಸ್‌ನವರಿಗೆ ಇದೆ. ನಾ ಹೋಗೋದಿಲ್ಲ ಅಂತ ಕೆಲವರು ಹೇಳಿಕೆ ನೀಡಿದ್ದಾರೆ. 35 ವರ್ಷಗಳ ಕೇಸ್ ತೆಗೆದು ಜನರನ್ನ ಬಂಧಿಸುವ ಅತ್ಯಂತ ನೀಚ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ” ಎಂದು ಹರಿಹಾಯ್ದರು.
ಸಿದ್ದರಾಮಯ್ಯ ವಿರುದ್ಧ ಜೋಶಿ ಕಿಡಿ
ಪಿಎಫ್ಐ ಮತ್ತು ಡಿಜೆ ಹಳ್ಳಿ, ಕೆಜೆ ಮತ್ತು ಹಳೆ ಹುಬ್ಬಳ್ಳಿ ಪೊಲೀಸ್ ಸ್ಟೇಶನ್ ಮೇಲೆ ವ್ಯವಸ್ಥಿತವಾಗಿ ಸಂಚು ನಡೆಸಿ ಹಲ್ಲೆ ಮಾಡಿದರು. ಪೊಲೀಸ್ ಆಫೀಸರ್ ಸತ್ತೋಗುತ್ತಿದ್ದರು ಅಂತ ಚಾರ್ಜ್ ಶೀಟ್ ನಲ್ಲಿತ್ತು. ಅಂತವರನ್ನ ಬಿಡುಗಡೆಗೆ ಕಾಂಗ್ರೆಸ್ ಪಕ್ಷದವರು ಪತ್ರ ಬರೀತಿರಿ. ಈಗ 35 ವರ್ಷದ ಹಿಂದಿನ ಕೇಸ್ ಅದರಲ್ಲಿ ಒಬ್ಬರು ಹೋರಾಟದಲ್ಲಿ ಇರಲಿಲ್ಲ. ಯಾವ ಆಧಾರದಲ್ಲಿ ಬಂಧಿಸುತ್ತೀರಿ? ಸಿದ್ದರಾಮಯ್ಯ ಏನ್ ಮಾಡುತ್ತಿದ್ದೀರಿ? ನೀವೇನು ಮೊಘಲ್ ಸರ್ಕಾರ ನಡೆಸಬೇಕು ಅಂತ ಮಾಡಿದ್ದೀರಾ? ಇಸ್ಲಾಮಿಕ್ ಐಎಸ್ಎಸ್ ಸಂಸ್ಥೆ ರೀತಿ ಸರ್ಕಾರ ನಡೆಸಬೇಕು ಅಂತ ಅಂದುಕೊಂಡಿದ್ದೀರಾ? ನೀವು ಐಎಸ್ಎಸ್ ಅಂತ ಅಂದುಕೊಂಡಿದ್ದೀರಾ?” ಎಂದು ಜೋಶಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮಭಕ್ತರಲ್ಲಿ ಭಯ ಸೃಷ್ಟಿಸುವ ಕೆಲಸ: ಆರ್ ಅಶೋಕ
ಹಳೆಯ ಪ್ರಕರಣಗಳನ್ನು ಮರು ಪರಿಶೀಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರಾಮಭಕ್ತರಲ್ಲಿ ಭಯ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ಆದರೆ ರಾಮಭಕ್ತರ ನೆರವಿಗೆ ಬಿಜೆಪಿ ನಿಲ್ಲಲಿದೆ, ಇದಕ್ಕೆ ಯಾರೂ ಅಂಜಬೇಕಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಮಜನ್ಮಭೂಮಿ ಹೋರಾಟದಲ್ಲಿ ನಾನು ಕೂಡ ಪಾಲ್ಗೊಂಡಿದ್ದೇನೆ. ಕರಸೇವೆಗೆ ಯಾರು ಹೋಗಿದ್ದಾರೆ ಎಂದು ಈಗ ಪೊಲೀಸರು ಹುಡುಕುತ್ತಿದ್ದಾರೆ. ಈ ಮೂಲಕ ರಾಮಭಕ್ತರಿಗೆ ಸಂದೇಶ ನೀಡುತ್ತಿದ್ದಾರೆ. ರಾಮಮಂದಿರ ಉದ್ಘಾಟಿಸುವ ಸಮಯದಲ್ಲೇ ಹಳೆ ಪ್ರಕರಣ ಪರಿಶೀಲನೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“31 ವರ್ಷದ ಹಳೆಯ ಪ್ರಕರಣದಲ್ಲಿ ಮೂರ್ನಾಲ್ಕು ಜನರು ಮೃತಪಟ್ಟಿದ್ದಾರೆ. ಇಷ್ಟಿದ್ದರೂ ನೋಟಿಸ್ ಕೂಡ ನೀಡದೆ ಕರಸೇವಕರನ್ನು ಬಂಧಿಸಿದ್ದಾರೆ. ಒಬ್ಬ ಆಟೋರಿಕ್ಷಾ ಚಾಲಕ ವರ್ಷಪೂರ್ತಿ ಅಲ್ಲೇ ಆಟೋ ಚಲಾಯಿಸಿಕೊಂಡು ದುಡಿಯುತ್ತಿದ್ದಾನೆ. ಅವನನ್ನು ತಲೆಮರೆಸಿಕೊಂಡಿದ್ದಾನೆ ಎಂಬ ನೆಪ ಹೇಳಿರುವ ಮಾನ ಮರ್ಯಾದೆ ಇಲ್ಲದ ಸರ್ಕಾರ ಆತನನ್ನು ಬಂಧಿಸಿದೆ. ರಾಮಮಂದಿರ ಉದ್ಘಾಟನೆಗೆ ಯಾರೂ ಹೋಗಬಾರದು ಎಂಬಂತಹ ಸ್ಥಿತಿ ನಿರ್ಮಿಸಲಾಗುತ್ತಿದೆ. ರಾಮನ ಪೂಜೆ ಮಾಡಬಾರದು ಎಂದು ಬೆದರಿಕೆ ಹಾಕಲಾಗುತ್ತಿದೆ” ಎಂದು ಆರೋಪಿಸಿದರು.
ಬಂಧನ ಖಂಡನೀಯ: ಬೊಮ್ಮಾಯಿ
“ರಾಮಮಂದಿರ ಉದ್ಘಾಟನೆಗೆ ಸಿದ್ದವಾಗಿರುವ ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 30 ವರ್ಷದ ಹಳೆಯ ಪ್ರಕರಣವನ್ನು ಕೆದಕಿ ಹಿಂದೂ ಕರಸೇವಕರ ಬಂಧನ ಮಾಡಿರುವುದು ಅತ್ಯಂತ ಖಂಡನೀಯ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿರುವಂತ್ತಿರುವುದು ಕಾಂಗ್ರೆಸ್ ನವರಿಗೆ ಸಹಿಸಲು ಆಗುತ್ತಿಲ್ಲ. ಇಡೀ ದೇಶದ ಜನ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದರ ಹಿಂದಿನ ಉದ್ದೇಶ ಏನು” ಎಂದು ಪ್ರಶ್ನಿಸಿದ್ದಾರೆ.
“ಈಗಾಗಲೇ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿರುವುದಕ್ಕೆ ಕಾಂಗ್ರೆಸ್ ಗೆ ಸಂಸತ್ತಿನಲ್ಲಿ ಪ್ರತಿಪಕ್ಷದ ಸ್ಥಾನವೂ ಇಲ್ಲದಂತಾಗಿದೆ. ಈ ರೀತಿಯ ದ್ವೇಷದ ರಾಜಕಾರಣದಿಂದ ರಾಜ್ಯದಲ್ಲಿಯೂ ಕಾಂಗ್ರೆಸ್ ಅಂತ್ಯ ಕಾಣುವುದೂ ನಿಶ್ಚಿತ” ಎಂದಿದ್ದಾರೆ.
ಸಿದ್ದರಾಮಯ್ಯ ರಾವಣ: ವಿ ಸುನೀಲ್ ಕುಮಾರ್
ರಾವಣ ಮಾತ್ರ ಅಲ್ಲ, ಸಿದ್ದರಾಮಯ್ಯ ಕೂಡ ರಾಮನ ವಿರೋಧಿ ಎನ್ನುವುದನ್ನು ತೋರಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್ ಸಿಎಂ ವಿರುದ್ದ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ನಾನು ಪಟ್ಟಿ ಕೊಡುತ್ತೇನೆ, ನಿಮಗೆ ತಾಕತ್ ಇದ್ದರೆ ಕರಸೇವಕರನ್ನು ಬಂಧಿಸಿ. ನಾನೂ ಕರ ಸೇವೆಯಲ್ಲಿ ಭಾಗಿಯಾಗಿದ್ದೆ, ಬಂಧನ ಮಾಡಿದಾಕ್ಷಣ ಹಿಂದುತ್ವಕ್ಕೆ ಧಕ್ಕೆ ಮಾಡಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.