ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ನಡುವೆ, 44 ನಿಗಮ/ಮಂಡಳಿಗಳಿಗೆ ಕಾಂಗ್ರೆಸ್‌ನ 44 ಮುಖಂಡರು ಹಾಗೂ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶಿದಿದೆ. ನಿಗಮ/ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಅಧ್ಯಕ್ಷರ ಪಟ್ಟಿಯನ್ನು ಅಂತಿಮಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಹಾಕಿದ್ದಾರೆ.
ನಿಗಮ/ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾದ ಆದೇಶ ಪಟ್ಟಿಯನ್ನು ಆಯಾ ಇಲಾಖೆಗಳಿಗೆ ಮುಖ್ಯಮಂತ್ರಿಗಳ ಸಚಿವಾಲಯ ರವಾನಿಸಿದೆ. ಜನವರಿ 26ರಂದೇ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆದರೆ, ನೇಮಕ ಮಾಡುವ ಪ್ರಕ್ರಿಯೆ ಆರಂಭವಾಗಿರಲಿಲ್ಲ. ಇದೀಗ, ಹೆಚ್ಚುವರಿಯಾಗಿ 10 ಮಂದಿ ಸೇರಿದಂತೆ 44 ಮಂದಿಯ ಪಟ್ಟಿಯನ್ನು ಸರ್ಕಾರ ಅಂತಿಮಗೊಳಿಸಿದೆ.
ಈ ಹಿಂದೆ, ನಿಗಮ/ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಕೇವಲ ಶಾಸಕರ ಹೆಸರುಗಳನ್ನು ಮಾತ್ರವೇ ಸೂಚಿಸಲಾಗಿತ್ತು. ಆ ಪಟ್ಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಕಾರ್ಯಕರ್ತರಿಗೂ ಅವಕಾಶ ನೀಡಬೇಕೆಂದು ತಾಕೀತು ಮಾಡಿತ್ತು. ಅಲ್ಲದೆ, ಪಟ್ಟಿ ಸಿದ್ಧಪಡಿಸುವ ಸಮಯದಲ್ಲಿ ತಮ್ಮ ಅಭಿಪ್ರಾಯ ಕೇಳಿಲ್ಲವೆಂದು ಗೃಹ ಸಚಿವ ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೆಲ್ಲದರ ನಡುವೆ ಇದೀಗ, ಕಾರ್ಯಕರ್ತರನ್ನು ಒಳಗೊಂಡ ಹೊಸ ಪಟ್ಟಿ ಸಿದ್ದಗೊಳಿಸಲಾಗಿತ್ತು. ಆ ಪಟ್ಟಿಯನ್ನು ಅಂತಿಮಗೊಳಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತ ಕೆ. ಮರಿಗೌಡ ಸೇರಿದಂತೆ 44 ಮಂದಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ. ಅಲ್ಲದೆ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಚ್.ಎಂ ರೇವಣ್ಣ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಸಮಿತಿಗೆ ಉಪಾಧ್ಯಕ್ಷರಾಗಿ ಮೆಹರೂಜ್ ಖಾನ್, ಪುಷ್ಪಾ ಅಮರನಾಥ್, ಎಸ್.ಆರ್ ಪಾಟೀಲ ಮತ್ತು ಸೂರಜ್ ಹೆಗ್ಡೆ ಅವರನ್ನು ನೇಮಿಸಲಾಗಿದೆ.