ಬಿಜೆಪಿಯವರದ್ದು ಮಾತೇ ಬೇರೆ, ಕೃತಿಯೇ ಬೇರೆ. ಅವರೇ ಹಿಂದೂ ದೇವಾಲಯಗಳ ದೊಡ್ಡ ವಿರೋಧಿಗಳು ಎನ್ನುವುದನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ತಿದ್ದುಪಡಿ ಮಸೂದೆ ವಿರೋಧಿಸುವ ಮೂಲಕ ಸಾಬೀತು ಮಾಡಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಭಾರೀ ಚರ್ಚೆಗೆ ಗ್ರಾಸವಾಗಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ತಿದ್ದುಪಡಿ ಮಸೂದೆ ಮೇಲ್ಮನೆಯಲ್ಲಿ ಬಿದ್ದು ಹೋಗಿರುವ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ” ಬಿಜೆಪಿಯವರು ರಾಜಕಾರಣ ಮಾಡಲಿ, ಮೂರು ತಿಂಗಳಲ್ಲಿ ನಮಗೆ ಮೆಜಾರಿಟಿ ಬರುತ್ತೆ, ಆವಾಗ ಈ ಬಿಲ್ ಅನ್ನು ವಿಧಾನ ಪರಿಷತ್ ನಲ್ಲಿ ಧ್ವನಿಮತದಿಂದ ಆಂಗೀಕರಿಸುತ್ತೇವೆ” ಎಂದರು.
“ನಮ್ಮ ಮುಜರಾಯಿ ಇಲಾಖೆಯ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿಯವರು ದೂರದೃಷ್ಟಿಯಿಂದ ಜಾರಿಗೆ ತರಲು ಉದ್ದೇಶಿಸಲಾಗಿದ್ದ ಮಸೂದೆಯಿದು. ಬಿಜೆಪಿ ಮತ್ತು ಜೆಡಿಎಸ್ ನವರು ಪೂರ್ವಯೋಜಿತವಾಗಿ ಪ್ಲ್ಯಾನ್ ಮಾಡಿಕೊಂಡು ಮಸೂದೆಯನ್ನು ವಿಧಾನ ಪರಿಷತ್ ನಲ್ಲಿ ಸೋಲಿಸಿದ್ದಾರೆ” ಎಂದರು.
“ನಮ್ಮ ಎರಡು ಗ್ಯಾರಂಟಿಯಿಂದಾಗಿ ಧಾರ್ಮಿಕ ಕೇಂದ್ರಗಳಲ್ಲಿ ಹಣ ಸಂಗ್ರಹ ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಇರುವ ದೇವಾಲಯಗಳಿಗೂ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಇದನ್ನು ಜಾರಿಗೆ ತರಲು ಉದ್ದೇಶಿಸಿದ್ದೆವು. ಇದರಿಂದ ದೇವಾಲಯವೂ ಅಭಿವೃದ್ದಿಯೂ ಆಗುತ್ತದೆ, ಅರ್ಚಕ ವೃಂದಕ್ಕೂ ಲಾಭವಾಗುತ್ತಿತ್ತು” ಎಂದು ಶಿವಕುಮಾರ್ ತಿಳಿಸಿದರು.
“ಸದ್ಯಕ್ಕೆ ನಮ್ಮ ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ. ಈ ಮಸೂದೆಯನ್ನು ಎರಡು ಪಾರ್ಟಿಯವರು ವಿರೋಧ ಮಾಡಿ ಬೀಳಿಸಿದ್ದಾರೆ. ಆದರೆ ಮಸೂದೆಯ ಭಾವನೆಯನ್ನು ಅರ್ಥವಾಗುತ್ತದೆ. ಹಳ್ಳಿಯಲ್ಲಿರುವ ದೇವರು ದೇವರಲ್ಲವೇ” ಎಂದು ಪ್ರಶ್ನಿಸಿದರು.