ನನಗೂ ಆಪರೇಶನ್ ಕಮಲ ಮಾಡಲು ಬಿಜೆಪಿ ಪ್ರಭಾವಿ ವ್ಯಕ್ತಿಯೊಬ್ಬರು ಯತ್ನಿಸಿದ್ದರು. ಎರಡು ತಿಂಗಳ ಹಿಂದೆ ನನಗೆ ಸಂಪರ್ಕ ಮಾಡಿ ದೊಡ್ಡ ಆಫರ್ ನೀಡಿದ್ದರು ಎಂದು ಆಳಂದ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಬಿ ಆರ್ ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಚುನಾವಣೆ ಖರ್ಚು ಮತ್ತು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವುದಾಗಿ ಆಫರ್ ಕೊಟ್ಟಿದ್ದರು” ಎಂದರು.
“ನನ್ನಂತಹ ಮೂರು ಜನ ಶಾಸಕರಿಗೂ ಸಹ ಆಪರೇಶನ್ ಕಮಲ ಮಾಡಲು ಯತ್ನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ನಾನು ಯಾವುದೇ ಕಾರಣಕ್ಕೂ ಆಪರೇಶನ್ ಕಮಲಕ್ಕೆ ಒಳಗಾಗುವುದಿಲ್ಲ” ಎಂದು ಹೇಳಿದರು.
“ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೂ ಕೂಡ ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರೇ ನಮಗೆ ಬಹಿರಂಗವಾಗಿ ಹೇಳಿದ್ದರು” ಎಂದು ಬಿ ಆರ್ ಪಾಟೀಲ್ ತಿಳಿಸಿದರು.
ರವಿ ಗಾಣಿಗ ಈ ಹಿಂದೆಯೇ ಆರೋಪ
ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಾಣಿಗ ಅವರು ಅಪರೇಷನ್ ಕಮಲ ಬಗ್ಗೆ ಈ ಹಿಂದೆಯೇ ಮಾತನಾಡುತ್ತ, “ಬಿಜೆಪಿ ಮತ್ತೊಮ್ಮೆ ಅಪರೇಷನ್ ಕಮಲ ಆರಂಭಿಸಿದೆ. ಯಾವ ಟೀಮ್ ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಪತನಗೊಳಿಸಿತ್ತೋ ಅದೇ ಟೀಂ ಈಗ ಆ್ಯಕ್ಟಿವ್ ಆಗಿದೆ. ಅಂದು ಸಕ್ರಿಯವಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌ಆರ್ ಸಂತೋಷ್ ಈ ಹೊಸ ಆಪರೇಷನ್ ಪ್ಲ್ಯಾನ್‌ನಲ್ಲೂ ಸಕ್ರಿಯವಾಗಿದ್ದಾರೆ” ಎಂದು ಆರೋಪಿಸಿದ್ದನ್ನು ಇಲ್ಲಿ ನೆನೆಯಬಹುದು.
50 ಕೋಟಿ ಆಫರ್ ಎಂದಿದ್ದ ಸಿಎಂ!
ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡಿ, ಬಿಜೆಪಿ ನಾಯಕರ ವಿರುದ್ಧ ಆಪರೇಷನ್ ಕಮಲದ ಆರೋಪ ಮಾಡಿದ್ದರು. “ನಮ್ಮ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸುತ್ತಿದ್ದು, ಪ್ರತಿಯೊಬ್ಬರಿಗೆ 50 ಕೋಟಿ ರೂ. ಆಫರ್ ಮಾಡುತ್ತಿದ್ದಾರೆ. ಸಚಿವ ಸ್ಥಾನ ನೀಡುತ್ತೇವೆ ಎಂದು ಆಫರ್ ಮಾಡುತ್ತಿದ್ದಾರೆ” ಎಂದು ಬಹಿರಂಗವಾಗಿಯೇ ಹೇಳಿದ್ದರು.