ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಕಳೆದ ತಿಂಗಳು ಅಂಬಿಕಾಪತಿ ನಿವಾಸಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಐಟಿ ರೇಡ್ (IT Raid) ವೇಳೆ ಅಂಬಿಕಾಪತಿ ಮನೆಯಲ್ಲಿ ಬರೋಬ್ಬರಿ 42 ಕೊಟಿ ರೂ. ಪತ್ತೆಯಾಗಿತ್ತು. ಈ ಘಟನೆಯಾದ ತಿಂಗಳಲ್ಲೇ ಅಂಬಿಕಾಪತಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಮ್ಮ ಮನೆಯಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾದ ಬಳಿಕ ಅಂಬಿಕಾಪತಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹಣದ ಮೂಲದ ಬಗ್ಗೆ ಐಟಿ ಅಧಿಕಾರಿಗಳು ಅಂಬಿಕಾಪತಿ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರಿಂದ ಅಂಬಿಕಾ ಪತಿಯವರು ಹೆಚ್ಚಿನ ಒತ್ತಡಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಈಗ ಇವರ ನಿಧನ ಒಟ್ಟಾರೆ ಬೆಳವಣಿಗೆಗೆ ತೀವ್ರ ಸ್ವರೂಪ ನೀಡಿದಂತಾಗಿದೆ.
ಅಸ್ವಸ್ಥತೆಯಿಂದ ಬಳಲಿದ ಅಂಬಿಕಾಪತಿ
ತಮ್ಮ ಮನೆಯಲ್ಲಿ ಕುಳಿತಿದ್ದ ಅಂಬಿಕಾಪತಿ ಅವರು ಅಸ್ವಸ್ಥತೆಯಿಂದ ಬಳಲಿದಂತೆ ಕಂಡುಬಂದರು. ಕೂಡಲೇ ಅವರನ್ನು ಅವರ ಮನೆಯವರು ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಡಿ ಕೆಂಪಣ್ಣ ಅವರ ನಿಕಟ ವರ್ತಿಯಾಗಿರುವ ಅಂಬಿಕಾಪತಿ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಸಂಬಂಧಿಯು ಹೌದು.
ಡಿ ಕೆಂಪಣ್ಣ ಸಂತಾಪ
ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಹಿರಿಯ ಗುತ್ತಿಗೆದಾರ ಆರ್ ಅಂಬಿಕಾಪತಿ ಅವರು ಇಂದು (27-11-2023)ಸಂಜೆ ನಿಧನ ಹೊಂದಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಮೃತರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಸಂತಾಪ ಸೂಚಿಸಿದ್ದಾರೆ.