ರಾಮನಗರದ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಸಿ ಆರ್ ಮಂಜುನಾಥ್ ಮತ್ತು ಈ ಹಿಂದೆ ರಾಮನಗರದ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಸದ್ಯ ಬೆಂಗಳೂರು ದಕ್ಷಿಣದ ಹಿರಿಯ ಪರಿಸರ ಅಧಿಕಾರಿಯಾಗಿರುವ ಎಸ್ ಕೆ ವಾಸುದೇವ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಅಮಾನತ್ತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ.
ರಾಮನಗರ ವಾಪ್ತಿಯ ಹಾರೋಗಳ್ಳಿಯಲ್ಲಿರುವ ಎನ್ವಿರೋ ರಿಸೈಕ್ಲೀನ್ ಪ್ರೈ.ಲಿ.ನ ಪ್ಲಾಸ್ಟಿಕ್ ತ್ಯಾಜ್ಯ ಮರು ಸಂಸ್ಕರಣಾ ಘಟಕಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸ್ಥಾಪನಾ ಮತ್ತು ಚಾಲನಾ ಸಮ್ಮತಿ ಪತ್ರವನ್ನು ನಿಯಮ ಉಲ್ಲಂಘಿಸಿ ನೀಡಿರುವ ಆರೋಪ ಅಮಾನತ್ತಿಗೆ ಒಳಗಾದ ಅಧಿಕಾರಿಗಳ ಮೇಲೆ ಕೇಳಿಬಂದಿದೆ.
ಕೇಂದ್ರ ಮಾಲಿನ್ಯ ನಯಂತ್ರಣ ಮಂಡಳಿಯ ಅಧ್ಯಕ್ಷರು ಪರಿಸರ ಸಂರಕ್ಷಣಾ ಕಾಯ್ದೆ 1986ರ ಕಲಂ5ರಡಿಯಲ್ಲಿ ಮಂಡಲಿಯ ಅಧ್ಯಕ್ಷರಿಗೆ ನೀಡಲಾಗಿದ್ದ ನಿರ್ದೇಶಾನುಸಾರ, ಮಂಡಳಿಯ ಕಾರ್ಯದರ್ಶಿಗಳು ಚಾಲನಾ ಪತ್ರ ನೀಡಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯ ಪರಿಸರ ಅಧಿಕಾರಿಗಳು ತಮ್ಮ ಪರಿವೀಕ್ಷಣಾ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದ್ದು,ರಾಮನಗರದ ಪರಿಸರ ಅಧಿಕಾರಿ ಸಿ ಆರ್ ಮಂಜುನಾಥ್, ಬೆಂಗಳೂಉ ದಕ್ಷಿಣ ಪರಿಸರ ಅಧಿಕಾರಿ ಎಸ್ ಕೆ ವಾಸುದೇವ್, ಕೇಂದ್ರ ಕಚೇರಿಯ ತ್ಯಾಜ್ಯ ನಿರ್ವಹಣಾ ಕೋಶದ ಪರಿಸರ ಅಧಿಕಾರಿ ಶ್ರೀಮತಿ ವಿಜಿ ಕಾರ್ತಿಕೇಯನ್, ಹಾಗೂ ಪರಿಸರ ಅಧಿಕಾರಿ ಎಂ ರುದ್ದೇಶ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ ಸಮಜಾಯಿಸಿ ಪರಿಶೀಲಿಸಿದ ಬಳಿಕ ಸಿ ಆರ್ ಮಂಜುನಾಥ್ ಮತ್ತು ಎಸ್ ಕೆ ವಾಸುದೇವ್ ಅವರು ಸದರಿ ಪ್ರಕರಣಕ್ಕೆ ನೇರಹೊಣೆಗಾರರರಾಗಿದ್ದು, ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಡಾ. ಶಾಂತ್ ಎ ತಿಮ್ಮಯ್ಯ ಅವರನ್ನು ಈ ಇಬ್ಬರು ಅಧಿಕಾರಿಗಳನ್ನು ಅಮಾನತ್ತಿಲ್ಲಿರಿಸಿ, ಜೊತೆಗೆ ನಿಯಮಾನುಸಾರ ಇಲಾಖೆ ವಿಚಾರಣೆಯನ್ನು ಪ್ರಾರಂಭಿಸಲು ಆದೇಶಿಸಿದ್ದಾರೆ.