ಕನ್ನಡದಲ್ಲೇ ರಾಮನ ಅರ್ಚನೆ ಮಾಡುವ ಚಿಕ್ಕಮಗಳೂರಿನ ಹಿರೇಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ವೇತನ ವಾಪಸ್ ಕೇಳಿದ್ದ ನೋಟಿಸ್ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಸ್ಥಳೀಯ ತಹಶೀಲ್ದಾರ್ ತಪ್ಪು ತೀರ್ಮಾನದಿಂದ ನೋಟಿಸ್ ಜಾರಿಯಾಗಿದೆ. ಅದನ್ನು ಹಿಂಪಡೆಯುತ್ತೇವೆ” ಎಂದರು.
ಕನ್ನಡದಲ್ಲೇ ಮಂತ್ರ ಪಠಣ ಮಾಡಿ ಅರ್ಚನೆ ಮಾಡುವ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದ ಹಿರೇಮಗಳೂರು ಕಣ್ಣನ್ ಅವರಿಗೆ ಜಿಲ್ಲಾಡಳಿತ ವೇತನ ವಾಪಸ್ ಕೇಳಿ ನೋಟಿಸ್ ಜಾರಿ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಲು ಆರಂಭವಾಗಿತ್ತು. ವಿಷಯ ಗಮನಕ್ಕೆ ಬಂದಕೂಡಲೇ ರಾಮಲಿಂಗಾರೆಡ್ಡಿ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
2013-14ರಿಂದ 2016-17ರವರೆಗೆ ವಾರ್ಷಿಕ 24 ಸಾವಿರ ರೂ ಅರ್ಚಕರಿಗೆ ಪಾವತಿಸಬೇಕಿತ್ತು. ಆದರೆ ತಪ್ಪಾಗಿ 90 ಸಾವಿರದಂತೆ ಹೆಚ್ಚುವರಿಯಾಗಿ ವಾರ್ಷಿಕವಾಗಿ 66 ಸಾವಿರ ಪಾವತಿಯಾಗಿದೆ. ಹಾಗೂ 2017-18ರಿಂದ 2021-22ನೇ ಸಾಲಿನವರೆಗೆ ವಾರ್ಷಿಕವಾಗಿ 48 ಸಾವಿರ ಪಾವತಿಸಬೇಕಿದ್ದು, ತಪ್ಪಾಗಿ 90 ಸಾವಿರ ರೂ ಪಾವತಿಸಲಾಗಿದೆ.
ಈ ಹೆಚ್ಚುವರಿಯಾಗಿ ಪಾವತಿಸಲಾದ 4,74 ಲಕ್ಷ ದೇವಾಲಯ ನಿಧಿಗೆ ಪಾವತಿಸುವಂತೆ ಚಿಕ್ಕಮಗಳೂರು ತಹಶೀಲ್ದಾರ್ ಅವರು ಕಣ್ಣನ್ ಅವರಿಗೆ ನೋಟಿಸ್ ನೀಡಿದ್ದರು. ಸದರಿ ನೋಟಿಸ್ ಅನ್ನು ವಾಪಸ್ ಪಡೆದು, ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಹಶೀಲ್ದಾರ್ ಮತ್ತು ಸಿಬ್ಬಂದಿಯಿಂದ ವಸೂಲಿ ಮಾಡಿ, ಜಮಾ ಮಾಡುವಂತೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.