ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ, ಅಶ್ಲೀಲ ಪದಗಳಿಂದ ಭಾವಚಿತ್ರವನ್ನು ವಿರೂಪಗೊಳಿಸಿ ಹಾಗೂ ಅವರ ಪತ್ನಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೆಪಿಸಿಸಿಯ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿ ಸಂಜಯ್ ಯಾದವ್ ಎಂಬುವವರು ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಏನಿದು ದೂರು?
ದೂರಿನಲ್ಲಿ, ದಿನಾಂಕ 11.01.2024 ರಂದು ಇನ್ಸ್‌ಟಾಗ್ರಾಮ್ ಸಾಮಾಜಿಕ ಜಾಲತಾಣದ ‘ಟ್ರೋಲ್ ಕನ್ನಡಿಗ(Troll Kannadiga)’ ಎಂಬ ಖಾತೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಟೋಪಿ ಹಾಗೂ ಗಡ್ಡ ಹಾಕಿ ಒಂದು ಸಮುದಾಯಕ್ಕೆ ಸೇರಿದವರಂತೆ ಬಿಂಬಿಸಲಾಗಿದೆ. ಅಲ್ಲದೇ, “ಮಿಸ್ಟೇಕ್ ಆಗಿ ಕುರುಬರ ವಂಶದಲ್ಲಿ ಹುಟ್ಟಿದ್ದಾನೆ. ಇವನು ಮಂಡ ಸಾಬ್ರಿಗೆ ಹುಟ್ಟಬೇಕಾಗಿತ್ತು” ಎಂದು ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆ.
ಅದೇ ರೀತಿ, ಇದೇ ಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆಗಳನ್ನು ಜೋಡಿಸಿ ರಾಮಭಕ್ತರನ್ನು ಕಾಡುತ್ತಿರುವ ಸಿದ್ದರಾವಣ ಎಂದು ಡಿಸೈನ್ ಮಾಡಿ, ಅವಾಚ್ಯವಾಗಿ ನಿಂದಿಸಿ, ಪೋಸ್ಟ್ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಅದರ ಲಿಂಕ್ ಅನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೇ, ಫೇಸ್‌ಬುಕ್‌ನಲ್ಲಿ ‘ಕೃತಿಕಾ ಕೃತಿ’ ಎಂಬ ಹೆಸರಿನ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಪತ್ನಿಯನ್ನು ಉಲ್ಲೇಖಿಸಿ, ಅಶ್ಲೀಲವಾಗಿ ನಿಂದಿಸಿ ಅವಹೇಳನ ಮಾಡಿದ್ದು, ಅವರ ಗೌರವಕ್ಕೆ ಧಕ್ಕೆ ತರಲಾಗಿದೆ. ಹೀಗಾಗಿ, ಈ ಮೂರು ಪೋಸ್ಟ್‌ಗಳನ್ನು ಹಾಕಿದವರನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೈಗ್ರೌಂಡ್ಸ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂಜಯ್ ಯಾದವ್ ಆಗ್ರಹಿಸಿದ್ದಾರೆ.