ಬೆಂಗಳೂರು: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಹೆಸರು ಹೇಳಿಕೊಂಡು ಬ್ಯಾಂಕ್ಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ ಹಲವಾರು ಮಂದಿಗೆ ಐನಾತಿ ಮಹಿಳೆಯೊಬ್ಬಳ ಗ್ಯಾಂಗ್ ಕೋಟ್ಯಂತರ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರು ನಗರದ ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡಿರುವ ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಆ್ಯಂಡ್ ಗ್ಯಾಂಗ್ ಹಲವಾರು ಮಂದಿಗೆ ವಂಚನೆ ನಡೆಸಿದ್ದು,ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಟ್ರಸ್ಟ್ಗೆ ಆರ್ಬಿಐನಿಂದ 17 ಕೋಟಿ ರೂ. ಬಂದಿರುವುದಾಗಿ ಹಾಗೂ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ಸಹಿ ಇರುವ ನಕಲಿ ಕಾಪಿ ತೋರಿಸಿ ಚಂದಾಪುರ, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ನೂರಾರು ಮಂದಿಗೆ ವಂಚನೆ ನಡೆಸಿದ್ದಾಳೆ.
ಕಂತೆ ಕಂತೆ ಹಣದ ನೋಟುಗಳ ವಿಡಿಯೋಗಳನ್ನು ಕಳುಹಿಸಿ ಜನರನ್ನು ಮರುಳು ಮಾಡಿದ ಪವಿತ್ರಾ, ಒಬ್ಬರಿಗೆ 10 ಲಕ್ಷ ಸಾಲ ನೀಡಿದರೆ ಅದರಲ್ಲಿ ಐದು ಲಕ್ಷ ರಿಯಾಯಿತಿ ಎಂದು ನಂಬಿಸಿದ್ದಳು.
ಸಾಲ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕೆಂದು ಕಥೆ ಕಟ್ಟಿದ್ದಾಳೆ. ಇದನ್ನು ನಂಬಿದ ಜನರು ಲಕ್ಷಾಂತರ ರೂ ಹಣ ನೀಡಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದಾರೆ.
ಆದರೆ, ಕೆಲವು ತಿಂಗಳಾದರೂ ಸಾಲ ಬಾರದೆ ಇದ್ದಾಗ ವಂಚಕಿ ಪವಿತ್ರಾಳ ಕಳ್ಳಾಟ ಬಯಲಾಗಿದೆ. ಸಾಲದ ಸುಲಿಗೆ ಸಿಲುಕಿದ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ಗ್ಯಾಂಗ್ ವಂಚನೆ ಸಂಬಂಧ ಸೂರ್ಯನಗರ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪವಿತಾ, ಪ್ರವೀಣ್, ಯಲ್ಲಪ್ಪ, ಶೀಲ, ರುಕ್ಮಿಣಿ, ರಾಧ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಹಾಲ್ಬರ್ಟ್ ಮಾರ್ಟಿನ್, ಹೇಮಲತಾ, ಶಾಲಿನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.