Homeಕರ್ನಾಟಕಬೆಂಗಳೂರಿಗೆ ಕುಡಿಯಲು 24 ಟಿಎಂಸಿ ಕಾವೇರಿ ನೀರು ಮೀಸಲಿರಿಸಿ ಆದೇಶ : ಡಿಸಿಎಂ ಡಿ ಕೆ...

ಬೆಂಗಳೂರಿಗೆ ಕುಡಿಯಲು 24 ಟಿಎಂಸಿ ಕಾವೇರಿ ನೀರು ಮೀಸಲಿರಿಸಿ ಆದೇಶ : ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕಾಗಿ ವಾರ್ಷಿಕವಾಗಿ 24 ಟಿಎಂಸಿ ಕಾವೇರಿ ನೀರನ್ನು ಮೀಸಲಾಗಿಡಲು ಮತ್ತು ಬಿಡಬ್ಲ್ಯೂಎಸ್ಎಸ್‌ಬಿ ಅದನ್ನು ಬಳಸಿಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, “2018 ರಲ್ಲಿ ಸುಪ್ರೀಂಕೋರ್ಟ್ ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 24 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದು ನಿಗದಿ ಮಾಡಿತ್ತು. ಆದರೆ ಇದುವರೆಗೂ ಯಾರೂ ಸಹ ಈ ವಿಚಾರವಾಗಿ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಉಳಿಕೆ 6 ಟಿಎಂಸಿ ನೀರನ್ನು ಬಳಸಿಕೊಂಡು, ಒಟ್ಟಾರೆ ಕುಡಿಯುವ ಉದ್ದೇಶಕ್ಕೆ 24 ಟಿಎಂಸಿ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ” ಎಂದರು.

“ಸಂಕಷ್ಟಕಾಲದಲ್ಲೂ 300- 400 ಟಿಎಂಸಿ ನೀರು ಬಿಡಬೇಕು ಎಂದು ತಮಿಳುನಾಡಿನವರು ಕೇಳಿದ್ದರು. ಕೆಆರ್‌ಎಸ್‌ ಗೆ ಒಳಹರಿವು ಸಂಪೂರ್ಣವಾಗಿ ನಿಂತೇ ಹೋಗಿದೆ. ಇಂತಹ ಸಂದರ್ಭವನ್ನು ಮನದಟ್ಟು ಮಾಡಿಕೊಡಬೇಕು ಎಂದು ನಿರ್ಧಾರ ಮಾಡಿದ್ದೇವೆ” ಎಂದು ಹೇಳಿದರು.

ಬೆಂಗಳೂರಿಗೆ 24 ಟಿಎಂಸಿ ನೀರು ಬಳಕೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದರೆ ಎಂದು ಪ್ರಶ್ನಿಸಿದಾಗ, “ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ, ಸುಪ್ರೀಕೋರ್ಟ್ ಕೊಟ್ಟಿರುವ ಆದೇಶವನ್ನು ಪಾಲಿಸುತ್ತಿದ್ದೇವೆ. ಅವರು ಏನಾದರೂ ಆಕ್ಷೇಪ ವ್ಯಕ್ತಪಡಿಸಲಿ, ನಮ್ಮ ಹಕ್ಕನ್ನು ನಾವೇಕೆ ಬಿಟ್ಟು ಕೊಡಬೇಕು. ಈ ಹಿಂದೆ ನೀಡಿರುವ ಆದೇಶವನ್ನೇ ಈಗ ಪಾಲಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಜೀವ ಕೊಟ್ಟಿದ್ದೇವೆ, ಕೆಆರ್ ಎಸ್ ಅಥವಾ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಭಾಗದಲ್ಲಾದರೂ ಇಷ್ಟು ಪ್ರಮಾಣದ ನೀರನ್ನು ನಾವು ಮೀಸಲಿರಿಸುತ್ತೇವೆ” ಎಂದು ಉತ್ತರಿಸಿದರು.

ಮೇಕೆದಾಟು ವಿಚಾರವಾಗಿ ಚರ್ಚೆ ನಡೆಸಲು ದಿನಾಂಕ ನಿಗದಿಯಾಗಿದೆಯೇ ಎಂದು ಪತ್ರಕರ್ತು ಕೇಳಿದಾಗ, “ಮುಂದಿನ ವಾರ ಚರ್ಚೆ ಮಾಡೋಣ ಎಂದು ಪ್ರಾಧಿಕಾರ ತಿಳಿಸಿದೆ. ಅವರ ಮುಂದೆ ವಿಚಾರ ಮಂಡಲಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರು ಬೆಳೆಯುತ್ತಿದೆ, ಇನ್ನು ಮುಂದಿನ 20 ವರ್ಷವನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕು” ಎಂದರು.

“ಪ್ರಸ್ತುತ ನಮ್ಮ ಕಾಂಗ್ರೆಸ್ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 89 ನೇ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು, ಮೇಕೆದಾಟು ಅಣೆಕಟ್ಟು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ಸಭೆಯ ವೇಳೆಗೆ ಮೇಕೆದಾಟು ವಿಚಾರವಾಗಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ” ಎಂದು ವಿವರಿಸಿದರು.

“ಪ್ರಾಧಿಕಾರ, ಸುಪ್ರೀಂ ಕೋರ್ಟ್ ಮುಂದೆ ಮೇಕೆದಾಟು ಯೋಜನೆ ಪ್ರಾರಂಭ ಮಾಡಲು ಅನುಮತಿ ನೀಡಬೇಕು ಎಂದು ನಾವು ಮನವಿ ಮಾಡುತ್ತೇವೆ. ಸಂಕಷ್ಟದ ಸಂದರ್ಭದಲ್ಲಿ ನೀರು ಹರಿಸಲು ಈ ಯೋಜನೆ ಸಹಕಾರಿಯಾಗುತ್ತದೆ, ಅಲ್ಲದೇ ತಮಿಳುನಾಡಿಗೆ ಈ ಯೋಜನೆಯಿಂದ ಹೆಚ್ಚು ಪ್ರಯೋಜನವಿದೆ. ಕಾವೇರಿ ನೀರು ಎಷ್ಟು ಪ್ರಮಾಣ ಉಳಿದುಕೊಳ್ಳುತ್ತದೆ, ಎಷ್ಟು ಹರಿದು ಹೋಗುತ್ತದೆ, ಎಷ್ಟು ಬಳಕೆಯಾಗುತ್ತದೆ ಎನ್ನುವ ವಿಚಾರವನ್ನು ಪ್ರಾಧಿಕಾರದ ಮುಂದೆ ಪ್ರಾತ್ಯಕ್ಷಿಕೆ ನೀಡುವ ವೇಳೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments