ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನಿಂದ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ಸಲ್ಮಾನ್ ಖಾನ್ಗೆ ಇದೀಗ ಲಾರೆನ್ಸ್ ಬಿಷ್ಣೋಯ್ ಸಹೋದರ ಹೊಸ ಬೆದರಿಕೆ ಹಾಕಿದ್ದಾನೆ. ಕಳೆದ 10 ದಿನಗಳಲ್ಲಿ ಮೂರು ಬೆದರಿಕೆಗಳು ಬಂದಿವೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ₹5 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಮಂಗಳವಾರ ಬೆದರಿಕೆ ಸಂದೇಶ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂದೇಶ ಕಳುಹಿಸಿದ ವ್ಯಕ್ತಿ ತಾನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಟೋಯಿ ಅವರ ಸೋದರ ಎಂದು ಹೇಳಿಕೊಂಡಿದ್ದಾನೆ.
ಯಾರೋ ಮುಂಬೈ ಟ್ರಾಫಿಕ್ ಪೊಲೀಸರಿಗೆ ಕರೆ ಮಾಡಿ 5 ಕೋಟಿ ರೂ. ಕೊಡದಿದ್ದರೆ ಸಲ್ಮಾನ್ ಖಾನ್ರನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಬೆದರಿಕೆ ಸಂದೇಶ ಬಂದ ನಂತರ ಮುಂಬೈನ ವರ್ಲಿ ಜಿಲ್ಲೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಲ್ಮಾನ್ ಖಾನ್ ಜೀವಂತವಾಗಿ ಉಳಿಯಬೇಕು ಎಂದು ಬಯಸುವುದಾದರೆ ಬಿಷ್ಟೋಯಿ ಸಮುದಾಯದ ದೇಗುಲಕ್ಕೆ ಭೇಟಿ ಕೊಟ್ಟು ಕ್ಷಮೆಯಾಚಿಸಬೇಕು ಅಥವಾ ₹5 ಕೋಟಿ ನೀಡಬೇಕು. ಇಲ್ಲದಿದ್ದರೆ ಅವನನ್ನು ಕೊಲ್ಲುತ್ತೇವೆ. ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಬೆದರಿಕೆ ಸಂದೇಶದ ಮೂಲ ಹುಡುಕಾಡಲು ಪೊಲೀಸಲು ತನಿಖೆ ಆರಂಭಿಸಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.