Homeಕರ್ನಾಟಕಎತ್ತಿನಹೊಳೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಬಂಡಲ್ ಬೊಗಳೆ: ಆರ್‌ ಅಶೋಕ್‌ ಟೀಕೆ

ಎತ್ತಿನಹೊಳೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಬಂಡಲ್ ಬೊಗಳೆ: ಆರ್‌ ಅಶೋಕ್‌ ಟೀಕೆ

ಬಿಜೆಪಿ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷಿಯ ಎತ್ತಿನಹೊಳೆ ಯೋಜನೆಯನ್ನ ಕಾಂಗ್ರೆಸ್ ಸರ್ಕಾರ ತನ್ನದೇ ಸಾಧನೆ ಎಂದು ಪುಟಗಟ್ಟಲೆ ಜಾಹೀರಾತು ಕೊಟ್ಟು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್ ಬೌದ್ಧಿಕವಾಗಿ ಮತ್ತು ನೈತಿಕವಾಗಿ ಎಷ್ಟು ದಿವಾಳಿ ಆಗಿದೆ ಎನ್ನುವುದಕ್ಕೆ ಸಾಕ್ಷಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಟೀಕಸಿದ್ದಾರೆ.

ಎಕ್ಸ್‌ ತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, “ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 2010ರಲ್ಲಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಯೋಜನೆ ರೂಪಿಸಿತ್ತು” ಎಂದಿದ್ದಾರೆ.

“2010ರಲ್ಲಿ ಅಂದಿನ ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಎತ್ತಿನಹೊಳೆ ಯೋಜನೆಯ ಪ್ರಸ್ತಾವನೆಯನ್ನು ಅಂದಿನ ಮುಖ್ಯಮಂತ್ರಿ ಯಡಿಯರಪ್ಪ ಅವರ ಮುಂದಿಟ್ಟಾಗ ತಾತ್ವಿಕ ಒಪ್ಪಿಗೆ ನೀಡಿದ್ದರು. 2012 ಅಂದಿನ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರು ಒಟ್ಟು 8,000 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದರು” ಎಂದು ಹೇಳಿದ್ದಾರೆ.

“2013ರಲ್ಲಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರ ವೇಳೆಗೆ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಮಾತು ಕೊಟ್ಟು, ಬಯಲು ಸೀಮೆ ಜನರಿಗೆ ಮೋಸ ಮಾಡಿದರು. ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಈ ಯೋಜನೆ ಪೂರ್ಣಗೊಳಿಸುವ ಬದ್ಧತೆ ತೋರಲೇ ಇಲ್ಲ” ಎಂದು ಟೀಕಿಸಿದ್ದಾರೆ.

“ನಂತರ 2022-23ರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ 3,000 ಕೋಟಿ ರೂಪಾಯಿ ಅನುದಾನ ನೀಡಿ ಎತ್ತಿನಹೊಳೆ ಯೋಜನೆಗೆ ವೇಗ ನೀಡಿತ್ತು. 2014ರಲ್ಲಿ 8,500 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಯೋಜನೆಯ ವೆಚ್ಚ ಇದೀಗ 23,251 ಕೋಟಿ ರೂ.ಗೆ ಮುಟ್ಟಿದೆ. ಇದಕ್ಕೆ ಯಾರು ಕಾರಣ” ಎಂದು ಪ್ರಶ್ನಿಸಿದ್ದಾರೆ.

“2013ರಿಂದ ಈಗ 2024ರವರೆಗೆ ಒಟ್ಟು ಸುಮಾರು 7-8 ವರ್ಷ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು, ಸುಮಾರು ಆರೂವರೆ ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದರು. ಈ ಯೋಜನೆ ಇಷ್ಟು ವಿಳಂಬವಾಗಲು ಯಾರು ಕಾರಣ? ಯೋಜನಾ ವೆಚ್ಚ ಆರಂಭಿಕ ಅಂದಾಜಿಗಿಂತ ಮೂರು ಪಟ್ಟು ಹೆಚ್ಚಾಗಲು ಕಾರಣ ಯಾರು” ಎಂದು ಕೇಳಿದ್ದಾರೆ.

“ಇಷ್ಟಾದರೂ ಬೆಟ್ಟ ಅಗೆದು ಇಲಿ ಹಿಡಿದರು ಎಂಬಂತೆ ಕಟ್ಟ ಕಡೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ , ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ತಲುಪುತ್ತದೆಯೋ ಇಲ್ಲವೋ ಎಂಬ ದಟ್ಟ ಅನುಮಾನ ಈ ಜಿಲ್ಲೆಗಳ ಜನರಲ್ಲಿ ಕಾಡುತ್ತಿದೆ. ಅಸಲಿಗೆ ಈ ಯೋಜನೆ ರೂಪಿಸಿದ್ದೇ ಈ ಮೂರು ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು. ಈ ಉದ್ದೇಶವೇ ಸಾರ್ಥಕವಾಗಿದ್ದಿದ್ದರೆ ಈ ಇಡೀ ಯೋಜನೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ” ಎಂದು ಹೇಳಿದ್ದಾರೆ.

“ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್‌ ಅವರಿಗೆ ನಿಜವಾಗಿಯೂ ಈ ಭಾಗದ ಜನರ ಬಗ್ಗೆ ಬದ್ಧತೆ ಇದ್ದಿದ್ದರೆ ಎತ್ತಿನಹೊಳೆ ಯೋಜನೆಗೆ ಈ ಮೂರು ಜಿಲ್ಲೆಗಳಲ್ಲಿ ಒಂದು ಕಡೆ ಚಾಲನೆ ನೀಡಬೇಕಾಗಿತ್ತು. ಕಾಂಗ್ರೆಸ್ ಸರ್ಕಾರದ ಬೋಗಸ್ ಗ್ಯಾರೆಂಟಿಗಳ ರೀತಿಯಲ್ಲಿ ಇಂದಿನ ಕಾರ್ಯಕ್ರಮವೂ ಒಂದು ಬಿಟ್ಟಿ ಪ್ರಚಾರ ಪಡೆಯುವ ನಾಟಕವೇ ಹೊರತು ಇದರಿಂದ ಜನರಿಗೆ ಯಾವುದೇ ಲಾಭವಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments