ನಮ್ಮ ನೆಲದ ಬಹುತ್ವವನ್ನು ಕಾಪಾಡುವುದೇ ಪತ್ರಿಕೋದ್ಯಮದ ಹೊಣೆಗಾರಿಕೆ ಆಗಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಹೇಳಿದರು.
ವಿಜಯಪುರ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, “ವಿಜಯಪುರ ಬಹು ಸಂಸ್ಕೃತಿ ಮತ್ತು ಬಹು ಭಾಷೆಗಳ, ಹಲವು ಸಂಸ್ಕಾರಗಳನ್ನು ಏಕ ಕಾಲಕ್ಕೆ ಆಚರಿಸುವ ಜಿಲ್ಲೆ. ಈ ಬಹುತ್ವವೇ ನಮ್ಮ ನಾಡಿನ ಹೆಮ್ಮೆ. ಈ ಬಹುತ್ವವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ” ಎಂದರು.
ಈ ಜಿಲ್ಲೆಯ ಬಹುತ್ವದ ಸಂಕೇತ ಕೂಡ ಹೌದು. ಇಲ್ಲಿ, ನನ್ನ ಬಲಗಡೆ ಬುದ್ದ, ಬಸವ ಮತ್ತು ಅಂಬೇಡ್ಕರ್ ಅವರ ಭಾವ ಚಿತ್ರಗಳನ್ನು ಅಳವಡಿದ್ದಾರೆ. ಬುದ್ದನಿಂದ ಹಿಡಿದು ಅಂಬೇಡ್ಕರ್ ಅವರ ವರೆಗೂ ಏನೇನು ಹೇಳಿದ್ದಾರೋ, ಯಾವುದಕ್ಕಾಗಿ ಶ್ರಮಿಸಿದ್ದಾರೋ ಅದನ್ನು ಕಾಪಾಡಿಕೊಳ್ಳುವುದೇ ಪತ್ರಕರ್ತರ ಜವಾಬ್ದಾರಿ” ಎಂದು ಹೇಳಿದರು.
“ನಮ್ಮ ಸಂವಿಧಾನದಲ್ಲಿ ಪತ್ರಕರ್ತರಿಗೆ ಪ್ರತ್ಯೇಕ ಹಕ್ಕು, ಅಧಿಕಾರಗಳನ್ನೇನೂ ನೀಡಿಲ್ಲ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವೂ ಆಗಿದೆ. ಈ ಅಭಿವ್ಯಕ್ತ ಸ್ವಾತಂತ್ರ್ಯದ ದುರುಪಯೋಗ ಆದಾಗ ಎಂತೆಂಥಾ ಅನಾಹುತಗಳು ಆಗುತ್ತವೆ ಎನ್ನುವುದನ್ನು ಈಗಾಗಲೇ ಈ ಸಮಾಜ ಕಂಡಿದೆ” ಎಂದರು.
“ಸಂವಿಧಾನದ ರಕ್ಷಣೆಯಿಂದ ಮಾತ್ರ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಸಾಧ್ಯ. ಜನರ ನಿರೀಕ್ಷೆ ಮತ್ತು ಸಮಸ್ಯೆಗಳನ್ನು ಅರಿಯಲು ಸರ್ಕಾರಕ್ಕಾಗಲಿ, ವಿರೋಧ ಪಕ್ಷಕ್ಕಾಗಲಿ ಇರುವ ಬಹುಮುಖ್ಯ ಸಾಧನ ಮಾಧ್ಯಮ. ಮೊದಲೆಲ್ಲಾ ಜನರ ನಿರೀಕ್ಷೆಗಳನ್ಮು ಮಾಧ್ಯಮಗಳು ಸರ್ಕಾರದ ಗಮನಕ್ಕೆ ತರುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಕಾರ್ಪೋರೇಟ್ ಶ್ರೀಮಂತರ ವೈಯುಕ್ತಿಕ ಹಿತಾಸಕ್ತಿಗಳೇ ಜನರ ಸಮಸ್ಯೆಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ. ಕಾರ್ಪೋರೇಟ್ ಸಂಸ್ಥೆಗಳು ಮಾಧ್ಯಮ ಲೋಕವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಮನರಂಜನೆ ಮತ್ತು ಸುದ್ದಿಗಳ ಆದ್ಯತೆ ಎರಡೂ ಬದಲಾಗಿವೆ” ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಫ.ಗು.ಹಳಕಟ್ಟಿಯವರ ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾ ಮತ್ತು ತಾಲ್ಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಾಗಲಕೋಟೆ ವರದಿ : ಪ್ರಜಾಪ್ರಭುತ್ವ ವಚನ ಚಳವಳಿಯ ಅಂತರಾಳ: ಪ್ರಭಾಕರ್
ಗಾಂಧಿವಾದ ಮತ್ತು ಸಮಾಜವಾದಿ ಆಶಯಗಳು ಆಳವಾಗಿ ಬೇರೂರಿರುವ ನೆಲ ಬಾಗಲಕೋಟೆ. ಪ್ರಜಾಪ್ರಭುತ್ವ ವಚನ ಚಳವಳಿಯ ಅಂತರಾಳ. ಬಾಗಲಕೋಟೆ ಸೂಫಿ-ಶರಣರ-ವಚನ ಚಳವಳಿಯ ನಾಡು. ಪ್ರಜಾಪ್ರಭುತ್ವದ ಸ್ಥಾಪನೆ ಮತ್ತು ರಕ್ಷಣೆ ವಚನ ಚಳವಳಿಯ ಆಶಯವೂ ಆಗಿದೆ ಎಂದು ಕೆ ವಿ ಪ್ರಭಾಕರ್ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
“ನಾನು ಮುಖ್ಯಮಂತ್ರಿಗಳ ಜೊತೆಗಿದ್ದ ಈ ಹತ್ತು ವರ್ಷಗಳಲ್ಲಿ ನಾನು ಗಮನಿಸಿರುವುದು ಏನೆಂದರೆ, ಮುಖ್ಯಮಂತ್ರಿಗಳಿಗೆ ಬಾಗಲಕೋಟೆ ಜಿಲ್ಲೆಗೆ ಹೋಗೋದು ಅಂದರೆ ತಮ್ಮ ತವರು ಜಿಲ್ಲೆ ಮೈಸೂರಿಗೆ ಹೋದಷ್ಟೇ ಸಂಭ್ರಮ ಪಡುತ್ತಾರೆ. ವಿಧಾನಸೌಧದಲ್ಲಿ ಬಾದಾಮಿಯವರು ಕಂಡರೆ ಕಾರು ನಿಲ್ಲಿಸಿ ಹತ್ತಿರಕ್ಕೆ ಕರೆದು ಆತ್ಮೀಯವಾಗಿ ಮಾತನಾಡುತ್ತಾರೆ” ಎಂದು ತಮ್ಮ ಅನುಭವ ಹಂಚಿಕೊಂಡರು.
“ಮುಂದಿನ 15-20 ದಿನಗಳಲ್ಲಿ ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಕೈಗೆ ಉಚಿತ ಬಸ್ ಪಾಸ್ ಸಿಗುವ ಸಿದ್ಧತೆಗಳು ಮುಗಿದಿವೆ. ಕಾರ್ಯ ಮರೆತ ಪತ್ರಕರ್ತರು ಮತ್ತು ವೃತ್ತಿ ತೊರೆದ ಪತ್ರಕರ್ತರು ಸರ್ಕಾರದ ಈ ಯೋಜನೆ ದುರುಪಯೋಗ ಆಗದಂತೆ ಸಹಕರಿಸಿ” ಎಂದು ಮನವಿ ಮಾಡಿದರು.
ಸರ್ಕಾರಿ ನಿವೇಶನ ಬಗ್ಗೆ ಸಚಿವರ ಜೊತೆ ಚರ್ಚಿಸಿದ ಕೆವಿಪಿ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪುರ ಅವರ ಜೊತೆ ಚರ್ಚಿಸಿದ ಪ್ರಭಾಕರ್ ಅವರು ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಕೊಡಿಸುವ ಬಗ್ಗೆ ವಿನಂತಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ತಿಮ್ಮಾಪುರ್ , ಜಿಲ್ಲಾಧಿಕಾರಿ ಜಾನಕಿ, ಸಿಇಓ ಕುರೇನ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.