Homeಕರ್ನಾಟಕಎಸ್‌ಎಸ್‌ಎಲ್‌ಸಿ ಟಾಪರ್‌ ಮುರಾರ್ಜಿ ಶಾಲೆಯ ಅಂಕಿತಾ ಸಿಎಂ ಸಿದ್ದರಾಮಯ್ಯಗೆ ಪತ್ರ

ಎಸ್‌ಎಸ್‌ಎಲ್‌ಸಿ ಟಾಪರ್‌ ಮುರಾರ್ಜಿ ಶಾಲೆಯ ಅಂಕಿತಾ ಸಿಎಂ ಸಿದ್ದರಾಮಯ್ಯಗೆ ಪತ್ರ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಅಂಕ ಗಳಿಸಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನ್ನನ್ನು ಬೆಂಗಳೂರಿಗೆ ಆಹ್ವಾನಿಸಿ, ಸನ್ಮಾನ ಮಾಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ.

ಜೊತೆಗೆ ಮುಖ್ಯಮಂತ್ರಿಯವರೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸ್ಥಾಪನೆಯ ರೂವಾರಿ ಎಂಬುದನ್ನು ತಿಳಿದು ಹರ್ಷ ವ್ಯಕ್ತಪಡಿಸಿದ್ದಾಳೆ. ಈ ಶಾಲೆಗಳಿಂದ ಅನೇಕ ಬಡ ಪ್ರತಿಭೆಗಳಿಗೆ ಶಿಕ್ಷಣ ದೊರಕಿ, ಬಾಳಿಗೆ ದಾರಿದೀಪವಾಗಿವೆ ಎಂದು ಬಣ್ಣಿಸಿದ್ದಾಳೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಂಕಿತಾಳನ್ನು ಬೆಂಗಳೂರಿಗೆ ಆಹ್ವಾನಿಸಿ, ಸನ್ಮಾನಿಸಿದ್ದಲ್ಲದೆ, ಮುಂದಿನ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿಯೂ ಘೋಷಿಸಿದ್ದರು. ಅಲ್ಲದೇ, ಅಂಕಿತಾ ಓದಿದ ಶಾಲೆಗೆ ಒಂದು ಕೋಟಿ ರೂಪಾಯಿ ಅನುದಾನ ನೀಡುವ ನಿರ್ಧಾರ ಮಾಡಿದ್ದರು.

ಪತ್ರದಲ್ಲಿ ಏನಿದೆ?

“ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಮಾಡುವ ಸಾಷ್ಟಾಂಗ ನಮಸ್ಕಾರಗಳು. ಈ ಬಾರಿ ಅಂದರೆ, 2023 -24ನೇ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು, ಸಂತಸಕರವಾದ ಸಂಗತಿಯಾಗಿದೆ. ಅದರಲ್ಲೂ ಪ್ರತೀ ಬಾರಿ ಫಲಿತಾಂಶ ಎಂದೊಡನೆ ದಕ್ಷಿಣ ಕರ್ನಾಟಕದೆಡೆ ಮುಖ ಮಾಡುತ್ತಿದ್ದ ಜನರ ದೃಷ್ಟಿ ಈ ಬಾರಿ ಬದಲಾಯಿತು. ಉತ್ತರ ಕರ್ನಾಟಕದ ಒಬ್ಬ ಸಾಮಾನ್ಯ ಹುಡುಗಿಯೂ ಸಹ ತಾನಂದುಕೊಂಡಿದ್ದನ್ನು ಸಾಧಿಸಬಲ್ಲಳು ಎಂದು ತೋರಿಸಿಕೊಟ್ಟಿದ್ದಕ್ಕೆ ತುಂಬ ಹೆಮ್ಮೆ ಇದೆ ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಶಾಲೆ ಬಡ ಪ್ರತಿಭೆಗಳಿಗೆ ದಾರಿ ದೀಪ

“ನನ್ನನ್ನು ಬೆಂಗಳೂರಿಗೆ ಆಹ್ವಾನಿಸಿ, ತಮ್ಮ ಸ್ವಗೃಹದವರೆಗೂ ಕರೆದು ಸನ್ಮಾನಿಸಿ, ಅಭಿನಂದಿಸಿ ನನ್ನ ಮುಂದಿನ ಭವಿಷ್ಟಕ್ಕೆ ನೆರವು ನೀಡಿದ್ದೀರಿ. ಅಷ್ಟೇ ಅಲ್ಲದೇ ತುಂಬು ಹೃದಯದಿಂದ ನನ್ನನ್ನು ಸತ್ಕರಿಸಿ, ಹರಸಿ, ಆಶೀರ್ವದಿಸಿದ್ದೀರಿ. ನಿಮ್ಮಿಂದಲೇ ಪ್ರಾರಂಭವಾದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಈ ಸಂಸ್ಥೆ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಳ್ಳಿಗೇರಿಯಲ್ಲಿ ನಾನು ಓದಿದ್ದು. ಈ ಎಲ್ಲಾ ವಸತಿ ಶಾಲೆಗಳ ಪ್ರಾರಂಭಿಕ ಕಾರಣೀಭೂತರು ತಾವೆಂದು ತಿಳಿದು ಬಹಳ ಸಂತಸವಾಗಿದೆ. ಸಾಕಷ್ಟು ಸುವ್ಯವಸ್ಥೆಯುಳ್ಳ ಈ ಶಾಲೆಗಳು ಸರ್ಕಾರಿ ಶಾಲೆಗಳು ಎಂದು ಸಾಕಷ್ಟು ಜನರಿಗೆ ಇವುಗಳ ಬಗ್ಗೆ ತಪ್ಪು ಕಲ್ಪನೆಯಿರುತ್ತದೆ. ಈ ಶಾಲೆಗಳಿಂದ ಸಾಕಷ್ಟು ಬಡ ಪ್ರತಿಭೆಗಳಿಗೆ ಶಿಕ್ಷಣ ದೊರಕಿಸಿ, ಬಾಳಿಗೆ ದಾರಿ ದೀಪವಾಗಿವೆ” ಎಂದಿದ್ದಾರೆ.

“ನಿಮ್ಮನ್ನು ಭೇಟಿ ಆಗುವುದು ಎಂದರೇ ಜನಸಾಮಾನ್ಯರಿಗೆ ಎಟುಕದ ಮಾತು . ಅಂತಹ ಸೌಭಾಗ್ಯ ನಮಗೆ ಒದಗಿ ಬಂದಿರುವುದಕ್ಕೆ ಬಹಳ ಸಂತೋಷವಿದೆ. ನಿಮ್ಮ ಆಶೀರ್ವಾದ ನನ್ನೊಂದಿಗೆ ಇರಲಿ ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments