Homeಅಭಿಮನ್ಯುವಿಶ್ಲೇಷಣೆ | ಸೈದ್ಧಾಂತಿಕ-ನೈತಿಕ ಅಧಃಪತನ, ಕಮರಿತೇ ದಳ?

ವಿಶ್ಲೇಷಣೆ | ಸೈದ್ಧಾಂತಿಕ-ನೈತಿಕ ಅಧಃಪತನ, ಕಮರಿತೇ ದಳ?

ಜೆಡಿಎಸ್ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದೆ. ತನ್ನ ತಪ್ಪುಗಳಿಂದಾಗಿಯೇ ಪಕ್ಷ ಇಂದು ಸಂಕಷ್ಟಕ್ಕೆ ಸಿಲುಕಿದ್ದು, ಮುಂದೇನು ಎಂಬುದು ಈಗ ಸ್ಪಷ್ಟವಾಗಿದೆ! ಈ ಕುರಿತು 'ಅಭಿಮನ್ಯು' ಮೇ ತಿಂಗಳ ಸಂಚಿಕೆಯಲ್ಲಿ ಪ್ರಕಟಗೊಂಡ 'ನೀರದ ಬೆಂಗಳೂರು' ಅವರ ವಿಶ್ಲೇಷಣೆ ಇಲ್ಲಿದೆ.

ಅಧಿಕಾರದಲ್ಲಿದ್ದಾಗ ರಾಜಕಾರಣಿಗಳು ಕಳಂಕ ಹಚ್ಚಿಕೊಂಡು ಜನಪ್ರಿಯತೆ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಅಧಿಕಾರದಲ್ಲಿದ್ದಾಗ ಜನಪ್ರಿಯರಾಗಿದ್ದವರು ವಿರೋಧಪಕ್ಷದಲ್ಲಿದ್ದಾಗ ಹೆಸರು ಕೆಡಿಸಿಕೊಂಡು, ಜನರ ದೂಷಣೆಗೊಳಗಾಗುವುದು ಅಷ್ಟೇನೂ ಸಾಮಾನ್ಯ ಬೆಳವಣಿಗೆ ಅಲ್ಲ. ಮಾಜಿ ಪ್ರಧಾನಿ, ಹರದನಹಳ್ಳಿ ದೇವೇಗೌಡರ ಕುಟುಂಬ ಈಗ ಎರಡನೆಯ ‘ಅಸಾಮಾನ್ಯ’ರ ಗುಂಪಿಗೆ ಸೇರಿದೆ. ಹೆಸರು ಕೆಡಿಸಿಕೊಂಡು ಸುದ್ದಿಯಲ್ಲಿದೆ.

ಕಳೆದ ವಿಧಾನಸಭಾ ಫಲಿತಾಂಶ ಪ್ರಕಟವಾದಾಗಲೇ ಎಲ್ಲರೂ ಜಾತ್ಯತೀತ ಜನತಾದಳದ ಮುಂದಿನ ಭವಿಷ್ಯವೇನು? ಎಂದು ಯೋಚಿಸಲಾರಂಭಿಸಿದ್ದರು. ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಕಷ್ಟು ಪರಿಶ್ರಮ ಪಟ್ಟರೂ ಫಲಿತಾಂಶ ಅಘಾತಕಾರಿಯಾಗಿತ್ತು. ರಾಜ್ಯದ ಜನ ಜೆಡಿಎಸ್‌ನ ಈ ಸ್ಥಿತಿಗೆ ಮಮ್ಮಲ ಮರುಗುತ್ತಿರುವಾಗಲೇ ಪಕ್ಷವೇ ‘ಆತ್ಮಹತ್ಯೆ’ಯ ಹಾದಿ ಹಿಡಿದಿದೆ. ಸಿದ್ಧಾಂತ, ಮೌಲ್ಯ ಕಳೆದುಕೊಂಡು, ಕಳಂಕವನ್ನು ಮೈ ತುಂಬಾ ಮೆತ್ತಿಕೊಂಡು ನಿಧಾನವಾಗಿ ಅಸ್ತಂಗತವಾಗುತ್ತಿದೆ. ಇದು ನಿಜಕ್ಕೂ ದುರಂತ.

ಕಳೆದ ಎರಡು ದಶಕಗಳಲ್ಲಿ ಜೆಡಿಎಸ್ ಪಕ್ಷದಲ್ಲಿ ಏನೆಲ್ಲಾ ಆಯಿತು ಎಂದು ನೋಡಿದರೆ ಈ ಸ್ಥಿತಿ ಊಹಿಸುವಂತಹದ್ದೆ. ದೇವೇಗೌಡರ ಕುಟುಂಬವೇ ಜೆಡಿಎಸ್‌ನ ಶಕ್ತಿ, ಪಕ್ಷದ ಇಂದಿನ ಈ ಸ್ಥಿತಿಗೂ ಈ ಕುಟುಂಬವೇ ಕಾರಣ ಎಂದು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ. ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಪ್ರಧಾನಿ ಪಟ್ಟಕ್ಕೇರಿದ್ದು, ದೇಶದ ಆಡಳಿತ ನಡೆಸಿದ್ದು, ನಂತರ ಪಕ್ಷದ ಮೇಲೆ ಬಿಗಿ ಹಿಡಿತ ಸಾಧಿಸಿದ್ದು ಎಲ್ಲ ನೋಡಿದರೆ ಅವರು ಎಂತಹ ಚತುರ ರಾಜಕಾರಣಿ ಎಂಬುದು ಅರ್ಥವಾಗುತ್ತದೆ. ಹೀಗಾಗಿಯೇ ಅವರಿರುವವರೆಗೆ ಜೆಡಿಎಸ್ ಅನ್ನು ನಿರ್ಲಕ್ಷಿಸುವಂತಿಲ್ಲ ಎಂದು ರಾಜ್ಯ ರಾಜಕಾರಣದ ವಿಶ್ಲೇಷಕರು ಹೇಳುತ್ತಲೇ ಬಂದಿದ್ದರು. ಈಗ ಪಕ್ಷಕ್ಕೆ ಕೊನೆಯ ಮೊಳೆ ಹೊಡೆಯಲೂ ಅವರೇ ನೇತೃತ್ವ ವಹಿಸಿ, ಹುಮ್ಮಸ್ಸಿನಿಂದ ಓಡಾಡುತ್ತಿದ್ದಾರೆ!

ಜೆಡಿಎಸ್ ಸೈದ್ಧಾಂತಿಕವಾಗಿ ಕುಸಿದು ಬಿದ್ದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ದೇವೇಗೌಡರ ಕುಟುಂಬಕ್ಕೆ ರಾಜಕಾರಣವನ್ನು ಇನ್ನು ಮುಂದುವರಿಸಲು ಯಾವ ನೈತಿಕತೆಯೂ ಇಲ್ಲ. ಕುಟುಂಬದ ಕುಡಿಯೇ ಸಾವಿರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅವರನ್ನು ಮಾನಸಿಕವಾಗಿ ನಾಶಮಾಡಿದ್ದಾನೆ. ಸಂಸದನಾಗಿ ಜನರ ಸಂಕಷ್ಟಗಳಿಗೆ ಮಿಡಿಯಬೇಕಾಗಿದ್ದ ಜನಪ್ರತಿನಿಧಿ ಕೀಚಕನಂತೆ ವರ್ತಿಸಿರುವುದನ್ನು ಖಂಡಿಸಲು ಕನ್ನಡದಲ್ಲಿಯೇ ಪದಗಳಿಲ್ಲ!

ಕುಮಾರಸ್ವಾಮಿಯಿಂದ ಶುರುವಾದದ್ದು!

ನಮ್ಮ ರಾಜ್ಯದಲ್ಲಿ ಜನತಾಪರಿವಾರದ ಭಾಗವಾಗಿದ್ದ ಜಾತ್ಯತೀತ ಜನದಾದಳದ ಅಧಃಪತನ ಶುರುವಾಗಿದ್ದು, ಬಿಜೆಪಿಯೊಂದಿಗೆ ಸೇರಿಕೊಂಡು ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ. ಸೈದ್ಧಾಂತಿಕವಾಗಿ ಯೋಚನೆ ಮಾಡದೆ, ಕೇವಲ ಅನುಕೂಲ ಸಿಂಧು ರಾಜಕಾರಣ ಮಾಡಿ ರಾಜ್ಯದಲ್ಲಿ ಬಿಜೆಪಿಗೆ ಗಟ್ಟಿ ನೆಲಗಟ್ಟು ಹಾಕಿಕೊಟ್ಟವರು ಕುಮಾರಸ್ವಾಮಿಯವರು.

‘ಇದು ತನಗೆ ಒಪ್ಪಿಗೆ ಇರಲಿಲ್ಲ’ ಎಂದು ದೇವೇಗೌಡರು ಹೇಳಿದರೂ ಈ ಮಾತನ್ನು ಯಾರೂ ಈಗಂತೂ ನಂಬುವುದಿಲ್ಲ.ಕೋಮುವಾದಿ ಪಕ್ಷದೊಂದಿಗೆ ಸೇರಿಕೊಂಡು ಜಾತ್ಯತೀತ ಸರ್ಕಾರ ನಡೆಸಲು ಸಾಧ್ಯವೇ? ‘ನಂತರ ಕೊಟ್ಟ ಮಾತು ತಪ್ಪಿದ್ದು’ ಬಿಜೆಪಿಗೆ ವರದಾನವಾಯಿತೇ ಹೊರತು, ಇದರಿಂದ ತಪ್ಪು ತಿದ್ದಿಕೊಂಡಂತಾಗಲಿಲ್ಲ. ಆದರೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ತಮ್ಮ ಕೆಲಸಗಳ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಮಾತ್ರವಲ್ಲ ರಾಜ್ಯದ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದಂತೂ ನಿಜ.

ಹಾಗೆ ನೋಡುತ್ತಾ ಹೋದರೆ ತಮ್ಮ ಪಕ್ಷದ ಜಾತ್ಯತೀತ ನೀತಿಯನ್ನೇ ಗೇಲಿ ಮಾಡುತ್ತಾ, ತಮ್ಮ ಪಕ್ಷವನ್ನು ವಿರೋಧಿಸುತ್ತಾ ಬಂದಿದ್ದ ಬಿಜೆಪಿ ಜತೆಗೇ ಕೈಜೋಡಿಸಿದ್ದ ಕುಮಾರಸ್ವಾಮಿಯವರಿಗೆ ಜನ ಮನ್ನಣೆ ನೀಡಲೇ ಬಾರದಿತ್ತು. ಅವರ ಆತ್ಮವಂಚನೆಯ ಮಾತಿನ ಬಗ್ಗೆ ಜನ ಅವರನ್ನು ದೂಷಿಸಬೇಕಿತ್ತು. ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಆ ಪಕ್ಷದ ವಿರೋಧಿಗಳೆಲ್ಲ ಜೆಡಿಎಸ್ ವಿರೋಧಿಗಳಾಗಬೇಕಿತ್ತು. ಅಂತಹದ್ದೇನೂ ಆಗಲೇ ಇಲ್ಲ, ಅವರ ಪಕ್ಷದ ಕಾರ್ಯಕರ್ತರು ಮತ್ತು ರಾಜ್ಯದ ಜನತೆ ಕುಮಾರಸ್ವಾಮಿ ಬಗ್ಗೆ ಉದಾರವಾಗಿ ನಡೆದುಕೊಂಡಿದ್ದರು. ಅವರು ಇಪ್ಪತ್ತು ತಿಂಗಳ ಅವಧಿಯ ಜನಪ್ರಿಯ ಮುಖ್ಯಮಂತ್ರಿ ಎನಿಸಿದರು.

ಅಭೂತಪೂರ್ವ ಸಾಧನೆ ಮಾಡಿ ಅವರು ಈ ಜನಪ್ರಿಯತೆ ಗಳಿಸಿದ್ದಲ್ಲ. ದ್ವೇಷಾಸೂಯೆ ಇಲ್ಲದ ಅವರ ಆ ಕಾಲದ ನಡವಳಿಕೆ, ಸಾಮಾನ್ಯ ಜನರ ಜತೆಗೆ ಅವರು ಒಂದಾಗುತ್ತಿದ್ದ ರೀತಿ, ತಪ್ಪು ಮಾತನಾಡಿದರೂ ಅದನ್ನು ತಿದ್ದಿಕೊಳ್ಳುತ್ತಿದ್ದ ವಿನಯವಂತಿಕೆ, ಜನಪರವಾದ ಕೆಲಸಗಳನ್ನು ಮಾಡಿ ಜನಪ್ರೀತಿ ಗಳಿಸಬೇಕೆಂಬ ಅವರ ತುಡಿತ-ಇವೆಲ್ಲವೂ ಅವರನ್ನು ಜನಪ್ರಿಯ ಮಾಡಿತ್ತು. ಜಾಗತೀಕರಣದ ನಂತರದ ದಿನಗಳಲ್ಲಿ ಆಳುವ ದೊರೆಗಳೆಲ್ಲ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ, ತಮ್ಮ ವಿರುದ್ಧವೇ ಸಂಚು ಮಾಡುತ್ತಿದ್ದಾರೆ ಎಂಬ ಕೊರಗು ಮತ್ತು ಆತಂಕದಲ್ಲಿರುವ ಹಳ್ಳಿ ಜನರಲ್ಲಿ ಕುಮಾರಸ್ವಾಮಿ ‘ನಮ್ಮವ’ನೆಂಬ ಭಾವನೆ ಹುಟ್ಟಿಸಿದ್ದರು.
ಅಲ್ಲದೆ ಈ ಜನ ಮೆಚ್ಚಿದ್ದು ಕುಮಾರಸ್ವಾಮಿ ದೇವೇಗೌಡರ ಮಗ ಎಂಬ ಕಾರಣಕ್ಕಲ್ಲ, ಮಗನಾದರೂ ಅವರ ಹಾಗೆ ಇಲ್ಲ ಎನ್ನುವ ಕಾರಣಕ್ಕೆ. ಇದರಿಂದಾಗಿಯೇ ಉತ್ತರ ಕರ್ನಾಟಕದಲ್ಲಿ ಎಂದೂ ದೇವೇಗೌಡರ ಸಭೆಗೆ ಸೇರದಷ್ಟು ಜನ ಕುಮಾರಸ್ವಾಮಿ ಸಭೆಗೆ ಸೇರುತ್ತಿದ್ದರು. ಹೀಗಾಗಿಯೇ ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್ ಮತ್ತೆ ಜಿಗಿದು ನಿಂತಿತ್ತು. ಏಕಾಂಗಿಯಾಗಿ ಚುನಾವಣೆಗೆ ಹೋದರೂ ಕಳಪೆ ಎನ್ನುವಂತಹ ಸಾಧನೆಯನ್ನೇನು ಮಾಡಿರಲಿಲ್ಲ.

ಹೀಗೆ ಜನಪ್ರಿಯತೆ ಪಡೆದ ಕುಮಾರಸ್ವಾಮಿಯವರ ವೈಯುಕ್ತಿಕ ಜೀವನ ಮಾತ್ರ ದಾರಿತಪ್ಪಿತ್ತು. ಚಿತ್ರನಟಿಯೊಂದಿಗಿನ ಸಂಬಂಧ, ಹಲವಾರು ನಟಿಯರು, ನಿರೂಪಕಿಯರೊಂದಿಗಿನ ಓಡನಾಟ ಬಹಿರಂಗ ಚರ್ಚೆಯ ವಿಷಯಗಳಾದವು. ಈ ಬೆಳವಣಿಗೆಯಿಂದ ತಲೆತಗ್ಗಿಸಬೇಕಾದ ಸ್ಥಿತಿ ಬಂದರೂ ದೇವೇಗೌಡರ ಕುಟುಂಬ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಈಗ ಅದೇ ಹಾದಿಯಲ್ಲಿ ಸಾಗಿ ಬಂದ ಕುಮಾರಸ್ವಾಮಿಯ ಅಣ್ಣನ ಮಗ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನೂರಾರು ಹೆಣ್ಣುಗಳ ಕಣ್ಣೀರಿಗೆ ಕಾರಣರಾಗಿದ್ದಾರೆ.

ಇತ್ತ ಜೆಡಿಎಸ್ ಅನ್ನು ಕಟ್ಟಿ ಬೆಳೆಸಲು ಸಾಕಷ್ಟು ಅವಕಾಶಗಳಿದ್ದರೂ ಅದನ್ನೆಲ್ಲಾ ಕೈ ಚೆಲ್ಲಿ ಮತ್ತೆ ಸೈದ್ಧಾಂತಿಕ ವಿರೋಧಿಯಾಗಿರುವ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಜೆಡಿಎಸ್ ವರಿಷ್ಠರು ತಮ್ಮ ತಲೆಯಮೇಲೆ ತಾವೇ ಕಲ್ಲುಚಪ್ಪಡಿ ಎಳೆದುಕೊಂಡಿದ್ದಾರೆ. ಕುಮಾರಸ್ವಾಮಿ ಸೈದ್ಧಾಂತಿಕ ರಾಜಕಾರಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಯಾವ ತಾತ್ವಿಕ ಮುಜುಗರವಿಲ್ಲದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿದವರು. ಆದರೆ ಎದುರಿಗಾದರೂ ಜಾತ್ಯತೀತ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ ದೇವೇಗೌಡರೇ ಈ ಬಾರಿ ಈ ಹೊಂದಾಣಿಕೆ ಮಾತುಕತೆಗೆ ನಾಂದಿ ಹಾಡಿದವರು.

ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿಗೆ ಈ ಬಗ್ಗೆ ಸ್ಪಷ್ಟತೆ ಇದೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಪಕ್ಷದ ವರಿಷ್ಠರು, ರಾಜ್ಯದ ನಾಯಕರೊಂದಿಗೆ ಮಾತನಾಡುತ್ತಾ “ನಾವು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದು ದಕ್ಷಿಣ ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಮಾತ್ರ. ಇದು ನಿಮಗೆ ನೆನಪಿರಲಿ. ಅನಗತ್ಯವಾಗಿ ಜೆಡಿಎಸ್ ಮೇಲಿನ ಆರೋಪಗಳನ್ನೆಲ್ಲಾ ನೀವು ಮೈಮೇಲೆ ಎಳೆದುಕೊಳ್ಳಬೇಡಿ. ಜೆಡಿಎಸ್‌ನ ಕಾರ್ಯಕರ್ತರನ್ನು ಪ್ರೀತಿಯಿಂದ ನೋಡಿಕೊಳ್ಳಿ, ಅವರು ಮುಂದೆ ಪಕ್ಷ ಸೇರುವಂತೆ ಮನವೊಲಿಸಿ” ಎಂಬ ಸಂದೇಶ ನೀಡಿ ಹೋಗಿದ್ದಾರೆ.

ಇಂದು ಬಿಜೆಪಿ ಕಾರ್ಯಕರ್ತರೊಂದಿಗೆ ಓಡಾಡಿ, ಪಕ್ಷಕ್ಕೆ ಬೆಂಬಲ ನೀಡಿದ ಶೇ. ೫೦ಕ್ಕಿಂತಲೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಮರಳಿ ಜೆಡಿಎಸ್‌ಗೆ ಹೋಗಲಾರರು ಎಂಬ ವಿಶ್ವಾಸ ಬಿಜೆಪಿ ನಾಯಕರದ್ದು. ಹೀಗಾಗಿಯ ಪಕ್ಷದ ವರಿಷ್ಠ ದೇವೇಗೌಡರನ್ನು ಹಾಡಿ ಹೊಗಳುತ್ತಾ, ಕುಮಾರಸ್ವಾಮಿಯವರಿಗೆ ಎಲ್ಲಿಲ್ಲದ ಗೌರವ ಕೊಡುತ್ತಾ, ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡು, ಹಳೇ ಮೈಸೂರು ಭಾಗದಲ್ಲಿ ಬಲವಾಗಿ ಬೇರೂರುವ ಪ್ರಯತ್ನ ನಡೆಸಿದ್ದಾರೆ. ಇದು ಸಾಧ್ಯವಾದಲ್ಲಿ ಜೆಡಿಎಸ್ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗಲಿದೆ!

ಕುಮಾರಸ್ವಾಮಿಗೆ ಗೊತ್ತಿರುವ ವಿಷಯವೇ!

ಬಿಜೆಪಿಯ ಈ ಕುತಂತ್ರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ದೇವೇಗೌಡರಿಗೆ ಅರ್ಥವಾಗದೇ ಇರಬಹುದು. ಆದರೆ ಕುಮಾರಸ್ವಾಮಿಗೆ ಅರ್ಥವಾಗದೇ ಇರುವ ವಿಷಯವೇನೂ ಅಲ್ಲ. ಬಿಜೆಪಿ ಸಿದ್ಧಾಂತದ ಬಗ್ಗೆ ಕಳೆದ ವರ್ಷವೇ ಅವರು ಒಮ್ಮೆ ಮಾತನಾಡುತ್ತಾ ಹೀಗೆಂದಿದ್ದರು; “ಒಂದು ಕಾಲದಲ್ಲಿ ಆರೆಸ್ಸೆಸ್‌ನವರು ಬಿಜೆಪಿ ಪಕ್ಷವನ್ನು ವಿಸರ್ಜಿಸಲು ಮುಂದಾಗಿದ್ದರು. ಆರೆಸ್ಸೆಸ್ ಚರಿತ್ರೆಯನ್ನು ಇತ್ತೀಚೆಗೆ ಹೆಚ್ಚು ತಿಳಿದುಕೊಂಡಿದ್ದೇನೆ. ಈ ದೇಶ ಮತ್ತು ರಾಜ್ಯವನ್ನು ನೂರಾರು ವರ್ಷ ಹಿಂದಕ್ಕೆ ಸರಿಸುವ ಹುನ್ನಾರಗಳು ನಡೆಯುತ್ತಿರುವುದು ಯಾರು ಬೇಕಾದರೂ ಗಮನಿಸಬಹುದು.

ಈ ದೇಶದ ಸಣ್ಣ ಪುಟ್ಟ ಸಮಾಜಗಳಿಗೆ ಆರೆಸ್ಸೆಸ್‌ನವರು ಶಿಕ್ಷಣ ಕೊಡಲಿಲ್ಲ. ಸಂಘ-ಸಂಸ್ಥೆಗಳು ಕೊಟ್ಟಿವೆ. ಆರೆಸ್ಸೆಸ್‌ನವರಿಗೆ ಇರುವುದು ಒಂದೇ ಅಜೆಂಡಾ. ‘ದಿ ಡೀಪ್‌ನೆಸ್’ ಕೃತಿಯ ಪ್ರಕಾರ ಅವರು ಬಡತನದ ಬಗ್ಗೆ, ಇನ್ನಿತರ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿ ಬಗ್ಗೆ ಕಿಂಚಿತ್ ಕಾಳಜಿ ಹೊಂದಿಲ್ಲ. ಅವರ ಬೈಠಕ್‌ಗಳಲ್ಲಿ ಚರ್ಚೆ ನಡೆದಿಲ್ಲ. ಅವರ ಚರ್ಚೆಗಳು ಈ ದೇಶವನ್ನು ತಮ್ಮ ಕಪಿಮುಷ್ಟಿಯಲ್ಲಿ ಹೇಗೆ ಹಿಡಿದಿಟ್ಟುಕೊಳ್ಳಬೇಕೆಂಬುದಷ್ಟೇ ಮುಖ್ಯ.

ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ದಿಲ್ಲಿಯಲ್ಲಿ ಆರೆಸ್ಸೆಸ್ ಬೈಠಕ್ ನಡೆಯುತ್ತದೆ. ಆ ಬೈಠಕ್‌ನಲ್ಲಿ ಭಾಗವಹಿಸಬೇಕೆಂದರೆ ಪ್ರಧಾನಿ, ಗೃಹಮಂತ್ರಿ ಚಡ್ಡಿ ಹಾಕಿಕೊಂಡು ಬರಬೇಕೆಂದು ಷರತ್ತು ವಿಧಿಸುತ್ತಾರೆ. ಆವತ್ತಿನ ಬಿಜೆಪಿಯ ಅಧ್ಯಕ್ಷರು ಚಡ್ಡಿ ಹಾಕಿಕೊಂಡು, ದೊಣ್ಣೆ ತರಲಿಲ್ಲ ಎಂದು ಹೇಳಿ ಬೈಠಕ್‌ನಿಂದ ಹೊರದಬ್ಬುತ್ತಾರೆ. ಇದೆಲ್ಲ ಇತಿಹಾಸವನ್ನು ಓದುತ್ತಾ ಹೋದರೆ ನನಗೆ ಮೈನಡುಕ ಬಂತು. ಇವತ್ತು ಈ ನಾಡಿನ ಯುವಕರು ಆರೆಸ್ಸೆಸ್‌ನ ಹುನ್ನಾರಗಳಿಗೆ ಬಲಿಯಾಗಬಾರದು ಎಂದು ವಿನಂತಿಸುತ್ತೇನೆ. ಆರೆಸ್ಸೆಸ್ ಕುರಿತ ವಾಸ್ತವ ಅಂಶಗಳನ್ನು ಈ ದೇಶದ ಜನತೆಗೆ ತಿಳಿಸದಿದ್ದರೆ ಈ ದೇಶದ ಜನರಿಗೆ ದ್ರೋಹ ಮಾಡಿದಂತೆ” ಎಂದು ಹೇಳಿದ್ದರು.

ಕೇವಲ ಒಂದು ವರ್ಷದ ಹಿಂದೆಯಷ್ಟೇ ಆರೆಸ್ಸೆಸ್ ಅಜೆಂಡಾವನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಆ ಸಂಘಟನೆಯ ಬಗ್ಗೆ ಎಚ್ಚರದಿಂದ ಇರಿ ಎಂದು ಕರೆಕೊಟ್ಟಿದ್ದ ಕುಮಾರಸ್ವಾಮಿ ಈಗ ಬಿಜೆಪಿಯೊಂದಿಗಿನ ಮೈತ್ರಿ ನಾಡಿನ ಒಳಿತಿಗಾಗಿ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಹ್ಲಾದ್ ಜೋಷಿಯವರನ್ನು ಗುರಿಮಾಡಿ ಚಿತ್ಪಾವನ ಬ್ರಾಹ್ಮಣರು, ಗೋಡ್ಸೆ ಸಂತತಿ ಈ ರಾಜ್ಯದ ಮುಖ್ಯಮಂತ್ರಿಯಾಗಬಹುದೆಂದು ಹೇಳುವ ಮೂಲಕ ಕಿಡಿ ಹೊತ್ತಿಸಿದ್ದ ಕುಮಾರಸ್ವಾಮಿ ಈಗ ಅದೇ ಜೋಷಿಯವರನ್ನು ಗೆಲ್ಲಿಸಲು ಹೊರಟಿದ್ದಾರೆ. ಈ ಅನಿವಾರ್ಯತೆ ಏನು? ಪಕ್ಷದ ಮುಂದಿನ ಭವಿಷ್ಯದ ಚಿಂತನೆಯೇ? ಅಥವಾ ಯಶಸ್ಸು ದೊರೆಯದೇ ಇರುವ ಹತಾಶೆ ಕಾರಣವೇ?

ಬಿಜೆಪಿಗೆ ಬೇಕಾಗಿರುವುದು ಪ್ರಾದೇಶಿಕ ಅಸ್ಮಿತೆಯನ್ನು ಹೊಂದಿದ್ದ ಜೆಡಿಎಸ್ ಪಕ್ಷವನ್ನು ನುಂಗಿ, ಅದರ ಶಕ್ತಿಯನ್ನು ಆವಾಹಿಸಿಕೊಂಡು ತಾನು ಬಲಿಷ್ಠವಾಗುವುದಷ್ಟೇ. ಲೋಕಸಭಾ ಚುನಾವಣೆಗೆ ಬಿಜೆಪಿಯ ಕಂಕುಗಳಲ್ಲಿ ಸಿಕ್ಕಿಕೊಂಡಿರುವ ಕುಮಾರಸ್ವಾಮಿ ಅವರಿಗೆ ಈ ಕಂಕಳು ಪೊರೆಯುವುದಕ್ಕಲ್ಲ. ಹೊಸಕಿ ಹಾಕುವುದನ್ನು ಗುರಿಯಾಗಿಟ್ಟುಕೊಂಡಿದೆ ಎಂಬುದು ಗೊತ್ತಿಲ್ಲದ ಸಂಗತಿಯೇನಲ್ಲ. ಹಾಗಿದ್ದರೂ, ಯಾವ ಅನಿವಾರ್ಯ ಅವರನ್ನು ಈ ಸ್ಥಿತಿಗೆ ದೂಡಿದೆ? ಅದು, ದೇವೇಗೌಡರಿಂದ ‘ದೈವಾಂಶ ಸಂಭೂತ’ರೆಂದು ಹೊಗಳಿಸಿಕೊಂಡ ಮೋದಿಯವರಿಗಷ್ಟೇ ಗೊತ್ತಿರಬಹುದಾದ ರಹಸ್ಯ ಎನ್ನುತ್ತಾರೆ ಹಿರಿಯ ಪತ್ರಕರ್ತ ವೈ.ಗ. ಜಗದೀಶ್.

ತಮ್ಮ ಅನಾರೋಗ್ಯದಿಂದ, ಕುಟುಂಬದ ಒಳಜಗಳಗಳಿಂದ ಬೇಸತ್ತ ಕುಮಾರಸ್ವಾಮಿಯವರಿಗೆ ಈಗ ಜೆಡಿಎಸ್ ಅನ್ನು ಉಳಿಸಿಕೊಂಡು ಬಹಳ ದಿನ ಸಂಘರ್ಷದ ಬದುಕು ನಡೆಸುವುದು ಕಷ್ಟ ಎಂಬುದು ಅರಿವಾಗಿದೆ. ಒಕ್ಕಲಿಗರ ಅಸ್ಮಿತೆ ಇದ್ದರೆ ಪಕ್ಷ ಮೂರ್ನಾಲ್ಕು ಜಿಲ್ಲೆಗಳಲ್ಲಿ ಹೇಗಿದ್ದರೂ ಉಳಿದುಕೊಂಡಿರುತ್ತದೆ. ಇದಕ್ಕಾಗಿ ಹೆಚ್ಚು ಯೋಚಿಸದೇ, ಕೇಂದ್ರದಲ್ಲಿ ಅಧಿಕಾರ ಹಿಡಿಯಬಲ್ಲ ಪಕ್ಷದೊಂದಿಗೆ ಇದ್ದು, ನೆಮ್ಮದಿಯ ದಿನಗಳನ್ನು ಕಾಣಬಹುದು ಎಂದು ಕುಮಾರಸ್ವಾಮಿ ಎಣಿಸಿದಂತಿದೆ. ಆದರೆ ಮಗ್ಗಲಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು ಇದಕ್ಕೆ ಅವಕಾಶ ಮಾಡಿಕೊಟ್ಟಾರೇ? ಕಾದು ನೋಡಬೇಕು.

ಆದರೆ ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಜೆಡಿಎಸ್‌ನ ಕಾರ್ಯಕರ್ತರು, ಮುಖಂಡರು ತಮ್ಮ ದಾರಿಯನ್ನು ತಾವೇ ಅಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಎರಡನೇಯ ಅವಕಾಶವಿಲ್ಲ ಎನ್ನುತ್ತಲೇ, ಕಾಂಗ್ರೆಸ್‌ನತ್ತ ವಾಲುತ್ತಾ ಪಕ್ಷಕ್ಕೆ ಗುಡ್‌ಬೈ ಹೇಳುತ್ತಿದ್ದಾರೆ.

ಗೆದ್ದರೆ ಕೇಂದ್ರ ಕೃಷಿ ಖಾತೆ ಸಚಿವರಾಗುತ್ತಾರಾ ಕುಮಾರಸ್ವಾಮಿ?

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದು, ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ರಾಜ್ಯದಿಂದ ಸಚಿವರಾಗುವವರು ಯಾರು ಎಂಬ ಕುರಿತು ಚುನಾವಣೆಯ ಹೊತ್ತಲ್ಲಿ ಜೆಡಿಎಸ್ ಕಾರ್ಯಕರ್ತರ ನಡುವೆ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು, ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪಕ್ಷಕ್ಕೆ ಟಾನಿಕ್ ಅಗಲಿದ್ದಾರೆ ಎಂಬ ಭರವಸೆಯಲ್ಲಿ ಪಕ್ಷದ ಅಪ್ಪಟ ಕಾರ್ಯಕರ್ತರಿದ್ದಾರೆ.
ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್‌ಗೆ ಬಿಜೆಪಿ ಮೂರು ಕ್ಷೇತ್ರಗಳನ್ನಷ್ಟೇ ಬಿಟ್ಟುಕೊಟ್ಟಿದೆ. ಮೂರಕ್ಕೆ ಮೂರರಲ್ಲಿ ಪಕ್ಷ ಗೆದ್ದರೂ ಹೆಚ್ಚೆಂದರೆ ಜೆಡಿಎಸ್‌ಗೆ ರಾಜ್ಯ ಖಾತೆಯೊಂದನ್ನು ನೀಡಬಹುದು. ಹೀಗಿರುವಾಗ ಕುಮಾರಸ್ವಾಮಿ ಗೆದ್ದರೆ ಕ್ಯಾಬಿನೆಟ್ ಮಿನಿಸ್ಟರ್ ಆಗಿ ಕೃಷಿ ಖಾತೆ ಪಡೆಯುತ್ತಾರೆ ಎಂಬುದು ಉತ್ಪ್ರೇಕ್ಷೆಯ ಮಾತಲ್ಲದೆ ಬೇರೇನೂ ಅಲ್ಲ.

ಇನ್ನು ಕುಮಾರಸ್ವಾಮಿಯವರ ಭಾವ ಡಾ. ಸಿ.ಎನ್. ಮಂಜುನಾಥ್ ಬಿಜೆಪಿಯಿಂದಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರು ಗೆದ್ದರೆ ದೇಶದ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಕೇಂದ್ರ ಸಚಿವರಾಗಲಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ. ಒಂದು ವೇಳೆ ಡಾ. ಮಂಜುನಾಥ್ ಗೆದ್ದು ಕೇಂದ್ರ ಸಚಿವರಾದರೆ ಅವರ ಕುಟುಂಬದವರೇ ಆದ ಕುಮಾರಸ್ವಾಮಿ ಹುದ್ದೆಯನ್ನು ತ್ಯಾಗ ಮಾಡಲೇಬೇಕಾಗುತ್ತದೆ. ಹೀಗಾಗಿ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಭಾಗವಾಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಕುಮಾರಸ್ವಾಮಿ ಪರ ಪ್ರಚಾರಕ್ಕೆ ಮಂಡ್ಯಕ್ಕೆ ಬಂದಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಕುಮಾರಸ್ವಾಮಿ ಗೆದ್ದರೆ ಕೇಂದ್ರ ಸಚಿವರಾಗುತ್ತಾರೆ ಎಂದು ಭಾಷಣ ಮಾಡಿದ್ದರು. ಜೆಡಿಎಸ್ ನಾಯಕರಂತೂ, “ಕುಮಾರಣ್ಣ ಕೇಂದ್ರದಲ್ಲಿ ಕೃಷಿ ಸಚಿವರಾಗುತ್ತಾರೆ” ಎಂದೇ ಅಬ್ಬರದ ಪ್ರಚಾರ ನಡೆಸಿದ್ದರು. ಕೇಂದ್ರ ಸಚಿವ ಸಂಪುಟದಲ್ಲಿ ಜೆಡಿಎಸ್ ಸ್ಥಾನ ಪಡೆಯಬೇಕಾದರೆ ಸ್ಪರ್ಧಿಸಿರುವ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿಯಾದರೂ ಪಕ್ಷ ಗೆಲ್ಲಬೇಕಿದೆ. ಮಾತ್ರವಲ್ಲದೆ, ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ನಿರೀಕ್ಷೆಯಷ್ಟು ಕ್ಷೇತ್ರಗಳಲ್ಲಿ ಗೆಲ್ಲದೇ ಇದ್ದಲ್ಲಿ ರಾಜ್ಯಕ್ಕೆ ಮೀಸಲಿಡುವ ಸಚಿವ ಸ್ಥಾನಗಳ ಸಂಖ್ಯೆಯೂ ಕಡಿಮೆಯಾಗಲಿದೆ.

ಪ್ರಧಾನಿ ಮೋದಿ ಕೇಂದ್ರ ಸಚಿವ ಸಂಪುಟ ರಚಿಸುವಾಗ ಎನ್‌ಡಿಎ ಮಿತ್ರಪಕ್ಷಗಳಿಗೆ ಅವಕಾಶ ನೀಡುತ್ತಲೇ ಬಂದಿದ್ದಾರೆ. ಆದರೆ ಮಹತ್ವದ ಖಾತೆಗಳನ್ನು ಬಿಜೆಪಿಯೇ ಇಟ್ಟುಕೊಳ್ಳುತ್ತದೆ. ಕೃಷಿಯಂತಹ ಖಾತೆಯನ್ನು ನೀಡುವಾಗ ಅಳೆದು-ತೂಗಿ ನೋಡಲಾಗುತ್ತದೆ. ಆಡಳಿತದ ಜತೆಗೆ ಆಳವಾದ ಜ್ಞಾನ ಕೂಡ ಇರಬೇಕಾಗುತ್ತದೆ. ಹೀಗಾಗಿ ದಕ್ಷಿಣ ಭಾರತದ ರಾಜಕಾರಣಿಗೆ ಕೃಷಿ ಖಾತೆ ನೀಡುವ ಸಾಧ್ಯತೆ ಬಹಳ ಕಡಿಮೆ ಎಂದು ವಿಶ್ಲೇಷಿಸುವ ಬಿಜೆಪಿಯ ಹಿರಿಯ ನಾಯಕರೊಬ್ಬರು, ೨೦೧೪ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗೆದ್ದಾಗಲೂ ಕೇಂದ್ರ ಕೃಷಿ ಖಾತೆ ಸಚಿವರಾಗುತ್ತಾರೆ ಎಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ಅವರನ್ನು ಸಚಿವರನ್ನಾಗಿ ನೇಮಕ ಮಾಡಿಕೊಂಡಿರಲಿಲ್ಲ ಎಂದು ನೆನಪಿಸಿದ್ದಾರೆ.

ಹಾಸನದ ಪೆನ್‌ಡ್ರೈವ್ ಹಗರಣವನ್ನು ಬಿಜೆಪಿ ವರಿಷ್ಠರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಗೆದ್ದರೂ ಅವರನ್ನು ಮಂತ್ರಿ ಮಾಡುವುದಿಲ್ಲ. ಈಗ ಕೇಳಲೂ ಇವರಿಗೆ ಮುಖವಿರುವುದಿಲ್ಲ ಎನ್ನುತ್ತಾರೆ ಜೆಡಿಎಸ್ ನಾಯಕರು. ಇದು ನಿಜ ತಾನೆ?

ಬರೆಹ: ನೀರದ ಬೆಂಗಳೂರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments