ಬಿಜೆಪಿಯ ಬಂಡಾಯ ನಾಯಕರು ಮೋದಿ ಪ್ರಧಾನಿಯಾಗಲೆಂದು ಸುಮ್ಮನಿದ್ದಾರೆ. ಚುನಾವಣೆಯಾದ ಮೇಲೆ ನೋಡಿ ಇದೆ ಆಟ. ರಾಜ್ಯ ನಾಯಕರಿಗೆ ಬುದ್ಧಿ ಕಲಿಸುತ್ತಾರೆ ಎಂದು ಬಿಜೆಪಿ ಒಳ ಸತ್ಯವನ್ನು ಶಾಸಕ ಲಕ್ಷ್ಮಣ ಸವದಿ ವಿಶ್ಲೇಷಿಸಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, “ಲೋಕಸಭೆ ಚುನಾವಣೆ ಬಳಿಕ ನೋಡಿ, ಇವರಿಗೆ ಬುದ್ಧಿ ಕಲಿಸುತ್ತೇವೆ ಎಂದು ಬಿಜೆಪಿಯ ಕೆಲವರು ಹೇಳಿದ್ದಾರೆ” ಎಂದರು.
ಈಗ ಒಬ್ಬೊಬ್ಬರ ಮುನಿಸು ಆರಂಭವಾಗಿದೆ. ಇನ್ನೂ ಅನೇಕರು ಕ್ಯೂನಲ್ಲಿದ್ದಾರೆ. ಈಶ್ವರಪ್ಪನವರನ್ನು ತಳ್ಳಿದ್ರು, ಸದಾನಂದ ಗೌಡರನ್ನು ತಳ್ಳಿದ್ರು, ಇನ್ನೂ ಕೆಲ ನಂಬರ್ ಗಳಿದ್ದಾವೆ” ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಸ್ಪರ್ಧೆ ವಿಚಾರವಾಗಿ ಮಾತನಾಡಿ, ” ಬಿಜೆಪಿಯವರು ಯಾವ ಕುರಿಯನ್ನು ಎಲ್ಲಿ ನಿಲ್ಲಿಸಬೇಕು, ಎಲ್ಲಿ ಬಲಿ ಕೊಡಬೇಕು ಎಂದು ವ್ಯವಸ್ಥಿತವಾಗಿ ಪ್ಲಾನ್ ಮಾಡುತ್ತಿದ್ದಾರೆ. ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟ ಹಾಗೇನು ಆಗಬೇಕು, ಪಾರ್ಲಿಮೆಂಟಿಗೆ ಹೋಗದಂತೆನೂ ಆಗಬೇಕು. ಪಾರ್ಲಿಮೆಂಟ್‌ಗೆ ಹೋದರೇ ಮಂತ್ರಿ ಆಗಬೇಕಾಗುತ್ತದೆ” ಎಂದು ತಿಳಿಸಿದರು.
“ಬಿಜೆಪಿಯಲ್ಲಿ ಹಿರಿತನ, ಸಂಘಟನೆ ಇರುವವರು, ಪಕ್ಷಕ್ಕೆ ಬಲ ತುಂಬುವವರ ಅವಶ್ಯಕತೆ ಇಲ್ಲ. ಒಟ್ಟಾರೆ ಬಿಜೆಪಿ ಅಧೋಗತಿಗೆ ಹೋಗುವುದು ಶತಸಿದ್ಧ. ನಮಗೆ ತಟ್ಟಿದ ಬಿಸಿ ಈಶ್ವರಪ್ಪ ಅವರಿಗೆ ತಟ್ಟಿದರೆ ಅರ್ಥ ಆಗಲಿದೆ ಎಂದು ಹೇಳಿದ್ದೆ. ಈಗ ಈಶ್ವರಪ್ಪ ಅವರಿಗೆ ಬಿಸಿ ತಟ್ಟಿದೆ” ಎಂದರು.