ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಚುನಾವಣೆಯ ಬಾಂಡ್ ವಿವರ ಎಲ್ಲ ಬಹಿರಂಗವಾಗಿದೆ. ಭಾರತೀಯ ಜನಾತಾ ಪಾರ್ಟಿಗೆ ಸುಮಾರು ಆರು ಸಾವಿರ ಕೋಟಿ ರೂ. ದೇಣಿಗೆ ಸಂದಾಯವಾಗಿದೆ. ಇದರಲ್ಲಿ ದೇಣಿಗೆದಾರರು ಇ.ಡಿ ಪ್ರಕರಣದಲ್ಲಿ ಸಿಲುಕಿದವರೇ ಹೆಚ್ಚಿದ್ದಾರೆ. ಅಂತವರನ್ನು ಹೆದರಿಸಿ ಮೋದಿ ಸರ್ಕಾರ ಹಣ ಪಡೆದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರವಾಗಿ ಆರೋಪಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಪ್ರಧಾನಿ ಮೋದಿ ಅವರು ಸತ್ಯ ಹರಿಶ್ಚಂದ್ರ ತರ ಮಾತನಾಡುತ್ತಿದ್ದರು. ‘ನಾ ಖಾವುಂಗಾ, ನಾ ಖಾನೆದೂಂಗಾ’ ಎನ್ನುತ್ತಿದ್ದ ಮೋದಿ ಈ ಹಣದ ಬಗ್ಗೆ ದೇಶಕ್ಕೆ ಉತ್ತರಿಸಬೇಕು” ಎಂದರು.
“ಬಿಜೆಪಿಗೆ ಶೇ.50ರಷ್ಟು ದೇಣಿಗೆ ಸಂದಾಯ ಆಗಿದೆ. ಕಾಂಗ್ರೆಸ್‌ಗೆ ಶೇ.11 ರಷ್ಟು ಚುನಾವಣೆ ಬಾಂಡ್ ಮೂಲಕ ಹಣ ಸಂದಾಯವಾಗಿದೆ. ಇತ್ತೀಚೆಗೆ ನಮ್ಮ ಪಕ್ಷದ ಅಕೌಂಟ್‌ಗಳನ್ನು ಸೀಸ್ ಮಾಡಲಾಗಿದೆ ಹೀಗಾದ್ರೆ ನಾವು ಚುನಾವಣೆಗೆ ಹೋಗುವುದು ಹೇಗೆ” ಎಂದು ಪ್ರಶ್ನಿಸಿದರು.
“6 ಸಾವಿರ ಕೋಟಿ ಬಿಜೆಪಿ ಮಡಿಲು ಸೇರಿದೆ. ವಿರೋಧ ಪಕ್ಷಗಳ ಬ್ಯಾಂಕ್ ಅಕೌಂಟ್ ಸೀಸ್ ಮಾಡಿದ್ರೆ ನಾವು ಹೇಗೆ ಚುನಾವಣೆ ಖರ್ಚುಗಳನ್ನು ಮಾಡಬೇಕು? ಮೋದಿ ಉದ್ದೇಶ ಸ್ಪಷ್ಟವಾಗಿದೆ; ವಿರೋಧ ಪಕ್ಷಳಿಗೆ ಹಣ ಸಿಗಬಾರದು ಎಂಬುದು. ಹೀಗಾಗಿಯೇ ನಮ್ಮ ಅಕೌಂಟ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು.
“ಕಾಂಗ್ರೆಸ್ ಪಕ್ಷ ಚುನಾವಣೆಯನ್ನೇ ಎದುರಿಸಬಾರದು ಎಂಬ ಷಡ್ಯಂತ್ರವನ್ನು ಬಿಜೆಪಿ ಹೂಡಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಚುನಾವಣೆ ಬಾಂಡ್ ಮಾಹಿತಿ ಬಹಿರಂಗವಾಗಿದೆ. ದೇಶದ ಮುಂದೆ ಇದರ ಸತ್ಯಾಸತ್ಯತೆ ತಿಳಿಯಬೇಕು. ಈ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು” ಎಂದು ಖರ್ಗೆ ಒತ್ತಾಯಿಸಿದರು.