Homeಕರ್ನಾಟಕಗ್ಯಾರಂಟಿ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬಳಕೆ ಖಂಡಿಸಿ ಕುಮಾರಸ್ವಾಮಿ ಕಿಡಿ

ಗ್ಯಾರಂಟಿ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬಳಕೆ ಖಂಡಿಸಿ ಕುಮಾರಸ್ವಾಮಿ ಕಿಡಿ

ಗ್ಯಾರಂಟಿಗಳ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ವೈಖರಿಯನ್ನು ಲಜ್ಜೆಗೇಡಿತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು; “ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ನಿಯೋಜಿತವಾಗಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ರಾಜ್ಯ ಸರಕಾರ ಮಾಡಿಸುತ್ತಿರುವ ಗ್ಯಾರಂಟಿ ಸಮೀಕ್ಷೆ ಲಜ್ಜೆಗೇಡಿತನದ ಪರಮಾವಧಿ. ಈ ಮಹಿಳೆಯರಿಗೆ ‘ಗ್ಯಾರಂಟಿ ಸ್ವಯಂ ಸೇವಕರು’ ಅಂತ ಹೆಸರು. ಹಾಗಾದರೆ, ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿ ತಮಗೆ ಬೇಕುಬೇಕಾದ ಸಂಸ್ಥೆಗಳಿಗೆ ಕೋಟಿ ಕೋಟಿ ಲೆಕ್ಕದಲ್ಲಿ ಸುರಿದ ಜನರ ತೆರಿಗೆ ಹಣ ಎಲ್ಲಿಗೆ ಹೋಯಿತು” ಎಂದು ಪ್ರಶ್ನೆ ಮಾಡಿದ್ದಾರೆ.

“ಹೆಚ್.ಎಂ.ರೇವಣ್ಣ ಅವರಿಗೆ ಸಂಪುಟದರ್ಜೆ ಕೊಟ್ಟು ರಚಿಸಲಾಗಿರುವ ‘ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ ಏನು ಕಿಸಿಯುತ್ತಿದೆ? ಜಿಲ್ಲೆ, ತಾಲೂಕು, ವಿಧಾನಸಭೆ ಕ್ಷೇತ್ರಗಳ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಸಮೀಕ್ಷೆ ಮಾಡುತ್ತಿಲ್ಲವೇ? ಗ್ಯಾರಂಟಿ ಅನುಷ್ಠಾನ ನಿರ್ವಹಣೆಗೆ ವಾರ್ಷಿಕ ₹16 ಕೋಟಿ ವೆಚ್ಚಿಸುತ್ತೇವೆ ಎಂದಿದ್ದಾರೆ ಸಿಎಂ. ಹಾಗಾದರೆ, ಇದಕ್ಕೆ ಹೋಗುತ್ತಿರುವ ವೇತನ, ಭತ್ಯೆಗಳೆಲ್ಲ ವ್ಯರ್ಥವೇ?” ಎಂದು ಕಿಡಿಕಾರಿದ್ದಾರೆ.

“ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪೋಲಿಯೋ ಲಸಿಕೆ ಹಾಕುವುದರ ಜತೆಗೆ ಈ ಸುಡುಬಿಸಿಲಿನಲ್ಲಿ ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಅದೂ ಒತ್ತಾಯಪೂರ್ವಕವಾಗಿ. ಹಾಗಾದರೆ, ಅವರೂ ಈ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತಾರೆಯೆ” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

“ಒಬ್ಬ ಕಾರ್ಯಕರ್ತೆಗೆ 120ರಿಂದ 150 ಮನೆ ಹಂಚಿಕೆ ಮಾಡಿದ್ದು, 10–15 ದಿನದಲ್ಲಿ ಸಮೀಕ್ಷೆ ಮುಗಿಸಬೇಕಿದೆ. ಬೆಳಗ್ಗೆ 9ರಿಂದ ಸಂಜೆ 4ರವರೆಗೂ ಉರಿಬಿಸಿಲಿನಲ್ಲಿ ಮಾಡುವ ಈ ಕೆಲಸಕ್ಕೆ ಅವರಿಗೆ ಸಿಗುವ ಗೌರವಧನ ಕೇವಲ ₹1,000!ಅದೇ ‘ಎಸಿ ರೂಂ ಸಮೀಕ್ಷೆ ಗಿರಾಕಿ’ಗಳಿಗೆ ಕೋಟಿ ಕೋಟಿ ಹಣ ಹೋಗುತ್ತಿದೆ” ಎಂದು ಕಿಡಿಕಾರಿದ್ದಾರೆ.

“ಜನರ ತೆರಿಗೆ ಹಣದಿಂದಲೇ ಗ್ಯಾರಂಟಿ ಸಮಾವೇಶಗಳನ್ನು (ಇವು ಚುನಾವಣಾ ಪ್ರಚಾರ ಸಭೆಗಳು) ಸಾಲು ಸಾಲಾಗಿ ನಡೆಸುತ್ತಿರುವ ಸರಕಾರಕ್ಕೆ ಸಮೀಕ್ಷೆಗಳ ಮೂಲಕವೂ ದುಡ್ಡು ಹೊಡೆಯುವ ಹಪಾಹಪಿ! ‘ಪಟ್ಟು-ಮಟ್ಟು-ಒಳಗುಟ್ಟು’ ಕಂಪನಿ ಸೇರಿ ಅಂತಹ ಹಲವಾರು ನಿಗೂಢ ಕಂಪನಿಗಳಿಗೆ ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿಯೇ ಕೋಟಿ ಕೋಟಿಯಷ್ಟು ಜನರ ತೆರಿಗೆ ಹಣ ಸುರಿಯುತ್ತಿದೆ ಸರಕಾರ” ಎಂದು ಟೀಕಾಪ್ರಹಾರ ನಡೆಸಿದ್ದಾರೆ.

“ಗ್ಯಾರಂಟಿ ಸಮಾವೇಶಗಳಿಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರೇ ಬರಬೇಕು, ಪಲ್ಸ್ ಪೋಲಿಯೋ ಲಸಿಕೆಯನ್ನೂ ಇವರೇ ಹಾಕಬೇಕು, ಗ್ಯಾರಂಟಿ ಸಮೀಕ್ಷೆಯನ್ನೂ ನಡೆಸಬೇಕು ಹಾಗೂ ತಮ್ಮ ನಿತ್ಯದ ನಿಗದಿತ ಕರ್ತವ್ಯವನ್ನೂ ನಿಭಾಯಿಸಬೇಕು. ಹಾಗಾದರೆ, ಸರಕಾರ ತೆರಿಗೆ ಹಣ ಸುರಿದು ಮಾಡಿಸುತ್ತಿರುವ ‘ಎಸಿ ರೂಂ ಸಮೀಕ್ಷೆ’ಗಳ ಕಥೆ ಏನು? ಸಮೀಕ್ಷೆ ಕಷ್ಟ ಈ ಹೆಣ್ಣುಮಕ್ಕಳದು, ಜನರ ತೆರಿಗೆ ಹಣ ‘ಎಸಿ ರೂಂ ಗಿರಾಕಿ’ಗಳದು! ಬವಣೆ ಒಬ್ಬರದು, ಭರ್ಜರಿ ಲಾಭ ಇನ್ನೊಬ್ಬರದು” ಎಂದು ಆರೋಪ ಮಾಡಿದ್ದಾರೆ.

ಪ್ರಚಾರಕ್ಕೆ ಬರವಿಲ್ಲ

“ಸಿದ್ದರಾಮಯ್ಯ ಅವರ ಸರಕಾರ ಮಾಡಿಕೊಂಡಿರುವ ಇಡೀ ಗ್ಯಾರಂಟಿ ಸೆಟಪ್ ಏನು ಮಾಡುತ್ತಿದೆ? ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಣ್ಣಬಣ್ಣದ ಜಾಹೀರಾತು ನೀಡುವುದಕ್ಕೆ ಮಾತ್ರ ಸೀಮಿತವಾಗಿದೆಯೇ? ಜನರ ತೆರಿಗೆ ದುಡ್ಡು, ಯಲ್ಲಮನ ಜಾತ್ರೆ ಎನ್ನುವಂತಾಗಿದೆ. ಬರ, ಕುಡಿಯುವ ನೀರಿನ ಹಾಹಾಕಾರದ ನಡುವೆಯೂ ಇವರ ಗ್ಯಾರಂಟಿ ರಾಜಕೀಯಕ್ಕೆ ಬರವಿಲ್ಲ, ಪ್ರಚಾರಕ್ಕೂ ಬರವಿಲ್ಲ” ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments