Homeಕರ್ನಾಟಕಜಾತಿ ಸಮೀಕ್ಷೆ ಇಟ್ಟುಕೊಂಡು ಸರ್ಕಾರ ಬೆಂಕಿಯ ಜೊತೆ ಆಟವಾಡಲು ಹೊರಟಿದೆ: ಮಾಜಿ ಸಿಎಂ ಬೊಮ್ಮಾಯಿ

ಜಾತಿ ಸಮೀಕ್ಷೆ ಇಟ್ಟುಕೊಂಡು ಸರ್ಕಾರ ಬೆಂಕಿಯ ಜೊತೆ ಆಟವಾಡಲು ಹೊರಟಿದೆ: ಮಾಜಿ ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ವರದಿ ಪಡೆದಿರುವುದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ. ಸರ್ಕಾರ ಬೆಂಕಿಯ ಜೊತೆ ಆಟವಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಪಕ್ಷ ಜಾತ್ಯತೀತ ಅಂತ ಕರೆಯುವ ಪಕ್ಷಕ್ಕೆ ಜಾತಿಗಳ ಮೇಲೆ ಪ್ರತಿ ಬರುತ್ತದೆ. ಚುನಾವಣೆ ಹತ್ತಿರ ಬಂದಾಗ ಜಾತಿ ಸಮಾವೇಶ, ಸುಳ್ಳು ಆಶ್ವಾಸನೆ ಕೊಡುವುದು ಮಾಡುತ್ತಾರೆ” ಎಂದರು.

“2017ರಲ್ಲಿ ಸಿದ್ದರಾಮಯ್ಯ ಅವರು ಎಲ್ಲ ಜಾತಿಗಳ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಮಾಡಲು ಸೂಚಿಸಿದ್ದರು. ಅವರ ಉದ್ದೇಶ ಬೇರೆ ಇತ್ತು. ಜಾತಿ ಗಣತಿ ಮಾಡುವ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿದೆ, ಅದನ್ನು ತಪ್ಪಿಸಲು ಇವರು ಶೈಕ್ಷಣಿಕ, ಸಾಮಾಜಿಕ ಅಧ್ಯಯನ ಅಂತ ಹೇಳಿ, ಉದ್ದೇಶ ಒಂದು, ಆದೇಶ ಒಂದು ಆಗಿರುವುದರಿಂದ ಈ ಗೊಂದಲ ಸೃಷ್ಟಿಯಾಯಿತು” ಎಂದು ಹೇಳಿದರು.

“ಕಾಂತರಾಜ ವರದಿ ಸಿದ್ದವಾದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆಗ ಚುನಾವಣೆ ಇದ್ದ ಕಾರಣ ವರದಿ ಸ್ವೀಕಾರ ಮಾಡಲಿಲ್ಲ. ಆಗ ವರದಿಯ ಬಗ್ಗೆ ಸಾಕಷ್ಡು ಗೊಂದಲ ಇತ್ತು. ಈಗ ಕೊಟ್ಟಿರುವ ವರದಿಯಲ್ಲಿಯೂ ಗೊಂದಲ ಇದೆ. ಇವರು 5.82 ಕೋಟಿ ಜನರನ್ನು ಸಂಪರ್ಕ ಮಾಡಿದ್ದೇವೆ ಅಂತ ಹೇಳುತ್ತಾರೆ. ಆದರೆ, ಬಹುತೇಕ ಜನರು ತಮ್ಮನ್ನು ಸಂಪರ್ಕ ಮಾಡಿಲ್ಲ ಎನ್ನುತ್ತಾರೆ. ಈಗ ಕೊಟ್ಟಿರುವ ವರದಿ ಚೌ ಚೌ ವರದಿ. ಡಾಟಾ ಕಾಂತರಾಜ ಅವರದು, ಜಯಪ್ರಕಾಶ್ ಹೆಗ್ಡೆ ಅವರು ವರದಿ ನನ್ನದು ಅಂತ ಹೇಳಿದ್ದಾರೆ. ಸಿಎಂ ಜಯಪ್ರಕಾಶ್ ಹೆಗ್ಡೆ ಅವರ ಅವಧಿ ವಿಸ್ತರಿಸಿ ರಾಜಕೀಯ ಕಾರಣಕ್ಕೆ ವರದಿ ಪಡೆದಿದ್ದಾರೆ”‌ ಎಂದು ಆರೋಪಿಸಿದರು.

ಜಾತಿ ಸಮೀಕ್ಷೆಗೆ ವಿರೋಧವಿಲ್ಲ

“ಜಾತಿ ಸಮೀಕ್ಷೆ ನಮ್ಮ ವಿರೋಧವಿಲ್ಲ. ಜಾತಿ ಸಂಖ್ಯೆಯ ಜೊತೆಗೆ ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಮೇಲೆತ್ತಬೇಕು ಎನ್ನುವ ಬದ್ದತೆ ನಮಗಿದೆ. ಅದಕ್ಕಾಗಿಯೇ ನಾವು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈಗ ಇವರು ತೆಗೆದುಕೊಂಡ ವರದಿಯ ಬಗ್ಗೆ ಸರ್ಕಾರ ಯಾಕೆ ಮುಚ್ಚು ಮರೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಕ್ತ ಚರ್ಚೆಯಾಗಬೇಕು. ಹಿಂದುಳಿದ ವರ್ಗದಲ್ಲಿ150 ಜಾತಿಗಳನ್ನು ಸೇರಿಸಿದ್ದಾರೆ. ಅವರಿಗೆ ಮೀಸಲಾತಿಯ ಬಗ್ಗೆ ಚರ್ಚೆಯಾಗಬೆಕು. ಹಿಂದುಳಿದವರಲ್ಲಿ ಅತಿ ಹಿಂದುಳಿದ ಕಟ್ಟ ಕಡೆಯ ಸಮುದಾಯಗಳಿಗೆ ಮೀಸಲಾತಿ ಪ್ರಯೋಜನ ಸಿಗುತ್ತಿಲ್ಲ. ಅವರಿಗೆ ಸೌಲಭ್ಯ ಸಿಗಬೇಕು. ಮುಖ್ಯಮಂತ್ರಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಅದು ಅಕ್ಷಮ್ಯ ಅಪರಾಧ” ಎಂದು ಹೇಳಿದರು.

“ಸರ್ಕಾರದ ನಡವಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ. ಅವರ ಸಂಪುಟದ ಸಚಿವರೆ ಅಪಸ್ವರ ಎತ್ತಿದ್ದಾರೆ. ನಿಮ್ಮ ಸಂಪುಟದಲ್ಲಿ ಒಗ್ಗಟ್ಟಿಲ್ಲವಾ? ಬದ್ದತೆ ಇಲ್ಲವೆ? ಜಾತಿ ಸಮೀಕ್ಷೆ ವಿಚಾರದಲ್ಲಿ ಸರ್ಕಾರ್ ಡಬಲ್ ಗೇಮ್ ಆಡುತ್ತಿದ್ದು, ಚೂಟುವವರೂ ಇವರೇ, ರಮಿಸುವವರೂ ಇವರೇ, ಬಡವರು, ತುಳಿತಕ್ಕೊಳಗಾದವರ ಜೊತೆ ಆಟ ಆಡುವುದು ಸರಿಯಲ್ಲ. ಸಮಾಜದಲ್ಲಿ ಗೊಂದಲ ಉಂಟು ಮಾಡುವ ಕೆಲಸ ಮಾಡಬೇಡಿ. ವರದಿ ಮಾಡಿದವರೊಬ್ಬರು ನೀಡುವವರೊಬ್ಬರು. ಸಿಎಂ ವರದಿ ಸ್ವೀಕಾರ ಮಾಡುತ್ತಾರೆ. ಅವರ ಸಚಿವರು ಅದನ್ನು ವಿರೋದ ಮಾಡುತ್ತಾರೆ. ಏನಿದು” ಎಂದು ಪ್ರಶ್ನಿಸಿದರು.

ಮುಸ್ಲೀಮರು ಅಲ್ಪ ಸಂಖ್ಯಾತರಲ್ಲ

“ರಾಜ್ಯ ಸರ್ಕಾರ ಸ್ವೀಕಾರ ಮಾಡಿರುವ ವರದಿಯಲ್ಲಿ 70 ಲಕ್ಷ ಜನ ಮುಸ್ಲೀಮರಿದ್ದಾರೆ ಎಂದು ಸೋರಿಕೆಯಾದ ವರದಿಯಲ್ಲಿ ಮಾಹಿತಿ ಇದೆ. ಹಾಗಿದ್ದರೆ ಅವರು ಅಲ್ಪ ಸಂಖ್ಯಾತರು ಹೇಗೆ ಆಗುತ್ತಾರೆ ? ರಾಜ್ಯದ ಬಹು ಸಂಖ್ಯಾತ ಜಾತಿಗಳಿಗಿಂತ ಅವರೇ ಹೆಚ್ಚಿನ ಜನಸಂಖ್ಯೆ ಇದ್ದಾರೆ ಎಂದರೆ ಅವರು ಹೇಗೆ ಅಲ್ಪ ಸಂಖ್ಯಾತರಾಗುತ್ತಾರೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments