ಮೀಟರ್ಬಡ್ಡಿ ವ್ಯವಹಾರ ನಡೆಸುತ್ತಿದ್ದ ಖದೀಮ ಹಾಗೂ ಆತನ ಸಹಚರರಾದ ಓರ್ವ ರೌಡಿಶೀಟರ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜರಾಜೇಶ್ವರಿನಗರದ ರೌಡಿ ಉಮೇಶ್ (30), ಮಂಜುನಾಥ್ (29) ಹಾಗೂ ಸುರೇಶ್ (19) ಬಂಧಿತ ಆರೋಪಿಗಳು.
ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಹೋಮ್ಸ್ನಲ್ಲಿ ಟ್ರಾವೆಲ್ಸ್ ಮಾಲೀಕರೊಬ್ಬರು ಚಿಕ್ಕಕಲ್ಲಸಂದ್ರದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊರ್ವನಿಂದ 23 ಲಕ್ಷ ಹಣವನ್ನು ಸಾಲವಾಗಿ ಪಡೆದುಕೊಂಡು ಸಾಲದ ಹಣಕ್ಕೆ ಬಡ್ಡಿ ಸೇರಿಸಿ ಸಾಲವನ್ನು ಹಿಂದಿರುಗಿಸಿದ್ದರು ಸಹ, ಈ ಸಾಲದ ಹಣಕ್ಕೆ ಸಾಲ ನೀಡಿದ ವ್ಯಕ್ತಿಯು ಮೀಟರ್ ಬಡ್ಡಿ ನೀಡುವಂತೆ ಒತ್ತಾಯಿಸಿ, ಹೆಚ್ಚುವರಿಯಾಗಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದನು.
ವಸೂಲಿಗೆ ಪ್ರಾಣ ಬೆದರಿಕೆ
ಸಾಲಗಾರನು ಹೆಚ್ಚುವರಿಯಾಗಿ ಹಣ ನೀಡಲು ನಿರಾಕರಿಸಿದಾಗ, ಸಾಲ ನೀಡಿದವನು ರೌಡಿ ಉಮೇಶ್ ಮತ್ತು ಆತನ ಸಹಚರನ ಮುಖೇನ ಸಾಲ ಪಡೆದವನಿಗೆ ಮೀಟರ್ ಬಡ್ಡಿ ನೀಡುವಂತೆ ಪ್ರಾಣ ಬೆದರಿಕೆ ಹಾಕಿಸಿ, ಹಣ ವಸೂಲಿ ಮಾಡಲು ಪ್ರಯತ್ನಿಸಿದ್ದರು. ಈ ಕುರಿತು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸಿ.ಸಿ.ಬಿಯ ಸಂಘಟಿತ ಅಪರಾಧ ದಳ (ಪಶ್ಚಿಮ) ದ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಮೀಟರ್ ಬಡ್ಡಿ ಸಾಲ ವಸೂಲಾತಿಗೆ ಪ್ರಯತ್ನಿಸಿದ್ದ ಕುಖ್ಯಾತ ರೌಡಿ ಉಮೇಶ್ ಸೇರಿದಂತೆ ಬಡ್ಡಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿ ಹಾಗೂ ಮತ್ತೊಬ್ಬನು ಸೇರಿ ಒಟ್ಟು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.