ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ಕೇಂದ್ರದ ವಿರುದ್ಧ ಧ್ವನಿ ಎತ್ತಲಿಲ್ಲ. ರಾಜ್ಯಕ್ಕೆ ಕೇಂದ್ರದ ಅನ್ಯಾಯ ವಿರೋಧಿಸುವುದು ತಪ್ಪೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ನವದೆಹಲಿಯಲ್ಲಿ ತೆರಿಗೆ ಹಂಚಿಕೆಯ ಬಗ್ಗೆ ರಾಜ್ಯದ ಪ್ರತಿಭಟನೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪವರು ಟೀಕಿಸಿರುವುದಕ್ಕೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿ, “ಕರ್ನಾಟಕದಿಂದ ನೀಡಲಾಗಿರುವ ತೆರಿಗೆಯನ್ನು ನಮಗೆ ನೀಡುತ್ತಿಲ್ಲ. 100 ರೂ.ಗೆ ಕೇವಲ 13 ರೂ. ರಾಜ್ಯಕ್ಕೆ ವಾಪಸ್ಸು ಬರುತ್ತಿದೆ. ರಾಜ್ಯದಿಂದ 4,30,000 ಕೋಟಿ ತೆರಿಗೆ ಬರುತ್ತಿದ್ದರೆ, ನಮಗೆ ಕೇವಲ 50,257 ಕೋಟಿ ರೂ.ಮಾತ್ರ ರಾಜ್ಯಕ್ಕೆ ಬರುತ್ತಿದೆ. ಕೇಂದ್ರದ ಈ ಧೋರಣೆಯನ್ನು ವಿರೋಧಿಸಲಾಗುತ್ತಿದೆ” ಎಂದರು.
ರಾಜ್ಯ ಸರ್ಕಾರದಿಂದ 650 ಕೋಟಿ ರೂ. ತಾತ್ಕಾಲಿಕ ಬರ ಪರಿಹಾರ
ಬರನಿರ್ವಹಣೆಗೆ ಸರ್ಕಾರದ ಕ್ರಮಗಳ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, “ಬರನಿರ್ವಹಣೆಯ ಕ್ರಮವಾಗಿ, ಕುಡಿಯುವ ನೀರು, ಮೇವು , ಉದ್ಯೋಗ ನೀಡಲಾಗುತ್ತಿದ್ದು, ಒಟ್ಟು 860 ಕೋಟಿ ರೂ.ಗಳನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಜನರು ಗುಳೇ ಹೋಗದಂತೆ ತಪ್ಪಿಸಲು ಹಾಗೂ ಅವರ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ” ಎಂದರು.
“ತಾತ್ಕಾಲಿಕ ಪರಿಹಾರವಾಗಿ ಒಬ್ಬ ರೈತನಿಗೆ ತಲಾ 2000 ದಂತೆ ಸುಮಾರು 34 ಲಕ್ಷ ರೈತರಿಗೆ 650 ಕೋಟಿ ರೂ. ನೀಡಲಾಗಿದೆ. ಐದು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಬರಪರಿಹಾರ ನೀಡಿಲ್ಲ. ರಾಜ್ಯದ ಬಿಜೆಪಿ ನಾಯಕರು ಕೇವಲ ಭಾಷಣ ಮಾಡುತ್ತಾರೆಯೇ ಹೊರತು, ಕೇಂದ್ರದೊಂದಿಗೆ ಸಂವಹಿಸಿ ಪರಿಹಾರ ದೊರಕಿಸಿ ಕೊಡುತ್ತಿಲ್ಲ” ಎಂದು ಹೇಳಿದರು.
40 ಪರ್ಸೆಂಟ್ ಕಮಿಷನ್, ದಾಖಲೆ ನೀಡಲಿ ಕೆಂಪಣ್ಣ: ಸಿದ್ದರಾಮಯ್ಯ
40 ಪರ್ಸೆಂಟ್ ಕಮಿಷನ್ ವಿಚಾರವಾಗಿ ತನಿಖೆ ನಡೆಸಲು ನಾಗಮೋಹನ್ ದಾಸ್ ನೇತೃತ್ವದಲ್ಲಿ ಕಮೀಟಿ ರಚನೆ ಮಾಡಿದ್ದೇವೆ. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಮತ್ತೆ 40 ಪರ್ಸೆಂಟ್ ಕಮಿಷನ್ ಆರೋಪಿಸಿದ್ದಾರೆ. ಈ ಬಗ್ಗೆ ದಾಖಲೆ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಭಗೀರಥ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “40% ಭ್ರಷ್ಟಾಚಾರ ಇದ್ದರೆ ದಾಖಲೆ ನೀಡಲಿ, ಅಲ್ಲದೆ ಅಧಿಕಾರಿಗಳು ಕೇಳುತ್ತಾರೆ ಎಂದಿದ್ದಾರೆ. ಅಂಥವರ ವಿರುದ್ದ ದೂರು ನೀಡಲಿ.ಕ್ರಮಕೈಗೊಳ್ಳುತ್ತೇವೆ” ಎಂದರು.
ಈಶ್ವರಪ್ಪ ವಿರುದ್ಧ ಕ್ರಮ
ದೇಶ ವಿಭಜನೆ ಹೇಳಿಕೆ ನೀಡುವವರನ್ನ ಕೊಲ್ಲುವ ಕಾನೂನು ತರಬೇಕು ಎನ್ನುವ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ಈಶ್ವರಪ್ಪನವರಿಗೆ ಕಡಿ, ಬಡಿ, ತರಿ ಇದು ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಈಶ್ವರಪ್ಪನ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ. ಕಡಿ, ಬಡಿ, ಕೊಲ್ಲು, ಕತ್ತರಿಸು ಭಾಷೆ ಬಿಟ್ಟು ಬಿಜೆಪಿಗೆ ಏನು ಬರಲ್ಲ” ಎಂದರು.
“ನನಗೆ ಆರ್ಎಸ್ಎಸ್ ಟ್ರೈನಿಂಗ್ ಆಗಿದೆ ಎನ್ನುತ್ತಾರೆ. ಇದೇನಾ ಟ್ರೈನಿಂಗ್ ಆಗಿರುವುದು ಈಶ್ವರಪ್ಪ? ಈಶ್ವರಪ್ಪ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಡಿ ಕೆ ಸುರೆಶ್ ಅವರನ್ನು ಕೊಲ್ಲಬೇಕು ಎಂದರೆ ಒಬ್ಬ ರಾಜಕೀಯ ಪಕ್ಷದ ಮುಖಂಡರಾಗಿ ಹೇಳುವ ಭಾಷೆನಾ ಇದು? ಇವರಿಗೆಲ್ಲ ಆರ್ಎಸ್ಎಸ್ ಟ್ರೈನಿಂಗ್ ಕೊಟ್ಟಿರುವುದು ಇದೇನಾ?” ಎಂದು ವಾಗ್ದಾಳಿ ನಡೆಸಿದರು.
“ಅನುದಾನದ ವಿಚಾರದಲ್ಲಿ ಸುಪ್ರೀಂ ಕೋರ್ಟ್ಗೆ ಹೋಗುವ ಆಲೋಚನೆ ಇಲ್ಲ. ನಮಗೆ ಅನ್ಯಾಯ ಆಗಿರುವುದು ನಿಜ. ನಾವು 100 ರೂ.ತೆರಿಗೆ ಕೊಟ್ಟರೆ 12 ರೂ ಮಾತ್ರ. ಇನ್ನುಳಿದ 88 ರೂ. ಕೇಂದ್ರಕ್ಕೆ ಹೋಗುತ್ತದೆ. ಗುಜರಾತ್ ಸಿಎಂ ಆದಾಗ ತೆರಿಗೆ ನಮ್ಮ ರಾಜ್ಯದ್ದು, ನಾವೇ ವಸೂಲಿ ಮಾಡುತ್ತೇವೆ ಎಂದರು. ಇದನ್ನ ಹೇಳಿದ್ದು ಮಿಸ್ಟರ್ ಮೋದಿ. ಈಗ ದೇಶ ವಿಭಜನೆ ಎಂದು ಹೇಳುತ್ತಿದ್ದಾರೆ. ನಮ್ಮ ಪಾಲು ನಾವು ಕೇಳಿದ್ರೆ ದೇಶ ವಿಭಜನೆ ಎನ್ನುತ್ತಾರೆ”ಎಂದರು.
“ಭದ್ರ ಮೇಲ್ದಂಡೆ ವಿಚಾರದಲ್ಲಿ ನಿರ್ಮಲ ಸೀತಾರಾಮನ್ ಯೋಜನೆಗೆ 5300 ಕೋಟಿ ರೂ ಹೇಳಿದ್ದಾರೆ. ಬಜೆಟ್ ನಲ್ಲಿ ಹೇಳಿದ್ದಾರೆಯೇ ವಿನಃ ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ. ನಾನು ಕೂಡಾ ನೀರಾವರಿ ಮಂತ್ರಿಗಳನ್ನ ಕೇಳಿದ್ದೇನೆ” ಎಂದು ಹೇಳಿದರು.