ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಅವರ ಕೊಲೆ ಸಂಬಂಧ ಸುಬ್ರಮಣ್ಯಪುರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸಿದ್ದಾರೆ.
ಪ್ರತಿಮಾ ಅವರನ್ನು ಕೊಲೆಗೈದ ಅವರ ಕಾರು ಚಾಲಕನಾಗಿದ್ದ ಬಂಧಿತ ಕಿರಣ್ ವಿರುದ್ಧ 600 ಪುಟಗಳ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಆರೋಪಿಯ ಹೇಳಿಕೆ ಜೊತೆಗೆ 70 ಮಂದಿ ಸಾಕ್ಷಿಗಳ ಹೇಳಿಕೆಯನ್ನು ಚಾರ್ಜ್ ಶೀಟ್ ನ್ನು ಲಗತ್ತಿಸಲಾಗಿದೆ.
ಪ್ರತಿಮಾ ಕೆಲಸ ಮಾಡುತ್ತಿದ್ದ ಇಲಾಖೆಯ ಸಹೋದ್ಯೋಗಿಗಳು, ಕುಟುಂಬಸ್ಥರು ಹಾಗೂ ನೆರೆಹೊರೆಯವರು ಸೇರಿದಂತೆ ಒಟ್ಟು 70 ಮಂದಿ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.
ಸಾಂದರ್ಭಿಕ ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಇನ್ಸ್ಪೆಕ್ಟರ್ ಜಗದೀಶ್ ಅವರು ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪ್ರತಿಮಾ ಹತ್ಯೆಗೈಯಲು ಒಂದು ತಿಂಗಳ ಹಿಂದೆ ಸಂಚು ರೂಪಿಸಿರುವುದು, ಹತ್ಯೆ ಮಾಡಿದ ಹಿಂದಿನ ದಿನ ಅಂದರೆ ಕಳೆದ ವರ್ಷ ನವೆಂಬರ್ 3 ರಂದು ರಾತ್ರಿ ದೊಡ್ಡ ಕಲ್ಲಸಂದ್ರದಲ್ಲಿರುವ ನಿವಾಸದ ಟೇರೆಸ್ ಹಿಂದೆ ಆರೋಪಿ ಕಿರಣ್ ಅವಿತು ಕುಳಿತಿದ್ದ ವಿಚಾರಗಳ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅವಿತಿದ್ದ ಕಾರು ಚಾಲಕ
ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಯಾಗಿ ಪ್ರತಿಮಾ, ಪ್ರಾಮಾಣಿಕ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಪ್ರತಿಮಾ ಬಳಿ ನಾಲ್ಕು ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್, ರಾಶ್ ಡೈವಿಂಗ್ ಮಾಡಿ ಅಪಘಾತಕ್ಕೆ ಕಾರಣನಾಗಿದ್ದ. ಅಲ್ಲದೆ ಅಪರಾಧ ಹಿನ್ನೆಲೆ ಹೊಂದಿದ್ದ ಕಿರಣ್ನನ್ನು ಕಳೆದ ಅಕ್ಟೋಬರ್ ನಲ್ಲಿ ಕೆಲಸದಿಂದ ಪ್ರತಿಮಾ ತೆಗೆದುಹಾಕಿದ್ದರು.
ಈ ಬಗ್ಗೆ ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಹಲವು ಬಾರಿ ಮಾಡಿದ ಮನವಿಗೆ ಪ್ರತಿಮಾ ಸ್ಪಂದಿಸಿರಲಿಲ್ಲ. ಇದರಿಂದಾಗಿ ಹತ್ಯೆಗೈಯಲು ನಿರ್ಧರಿಸಿದ ಕಿರಣ್, ನವೆಂಬರ್ 3 ರಂದು ಮನೆಯ ಟೆರೇಸ್ ಬಳಿ ಪ್ರತಿಮಾ ಬರುವಿಕೆಗಾಗಿ ಕಾದುಕುಳಿತಿದ್ದ. ಅಂದು ತಡವಾಗಿ ಪ್ರತಿಮಾ ಬಂದಿದ್ದರಿಂದ ವಾಪಸ್ ತೆರಳಿದ್ದ. ಮತ್ತೆ ನವೆಂಬರ್ 4ರಂದು ಮನೆ ಟೆರೇಸ್ ಬಳಿ ಅವಿತುಕೊಂಡಿದ್ದ. ಪ್ರತಿಮಾ ಬರುತ್ತಿದ್ದಂತೆ ಮನೆಗೆ ನುಗ್ಗಿ ವೇಲ್ನಿಂದ ಕುತ್ತಿಗೆ ಬಿಗಿದಿದ್ದ. ಅಡುಗೆ ಮನೆಯಲ್ಲಿದ್ದ ಚಾಕುವಿಂದ ಕುತ್ತಿಗೆ ಸೀಳಿ ಹತ್ಯೆಗೈದು ಮನೆಯಲ್ಲಿದ್ದ 5 ಲಕ್ಷ ದೋಚಿ ಮಲೆಮಹದೇಶ್ವರ ಬೆಟ್ಟ ಬಳಿ ತಲೆಮರೆಸಿಕೊಂಡಿದ್ದು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.