ಗ್ಯಾರಂಟಿ ಎಂಬ ಶಬ್ದ ಕರ್ನಾಟಕ ಮತ್ತು ಕಾಂಗ್ರೆಸ್ನಿಂದ ಬಂದಿದೆ. ಈಗ ದೊಡ್ಡ ಹೋಡಿಂಗ್ಗಳಲ್ಲಿ ‘ಪ್ರಧಾನಿ ಗ್ಯಾರಂಟಿ’ ಎಂದು ಬಿಜೆಪಿ ಬಿಂಬಿಸುತ್ತಿದೆ. ಇದು ನಮ್ಮ ಗ್ಯಾರಂಟಿಯ ನಕಲು ಅಷ್ಟೇ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ರಾಜ್ಯದಲ್ಲಿ ನಾವು ಆಶ್ವಾಸನೆ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದ್ದೇವೆ. ಗ್ಯಾರಂಟಿಯ ಮಹತ್ವ ಅರಿವಾಗಿ ಬಿಜೆಪಿಯವರು ಬಳಸುತ್ತಿದ್ದಾರೆ” ಎಂದರು.
“ಕೇಂದ್ರದಿಂದ ನಮಗೆ ಪದೇಪದೆ ಅನ್ಯಾಯವಾಗಿದೆ. ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ಸಿಗುತ್ತಿಲ್ಲ. ಬರ ಪರಿಸ್ಥಿತಿಯಲ್ಲಿ ಕೇಂದ್ರ ಸಹಾಯಕ್ಕೆ ಬರಲಿಲ್ಲ. ಹಾಗಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯೇ ಇದಕ್ಕೆ ಅಸ್ತ್ರ. ದೆಹಲಿಯಲ್ಲಿ ಫೆ.7ರಂದು ಪ್ರತಿಭಟನೆ ನಡೆಯುತ್ತಿದ್ದು, ಜಿಲ್ಲೆಯಲ್ಲಿರುವ ಕಾಂಗ್ರೆಸ್ನ 11 ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದೇವೆ” ಎಂದು ತಿಳಿಸಿದರು.
“ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ನನ್ನ ಪುತ್ರ ಮೃಣಾಲ್ ಹೆಬ್ಬಾಳಕರ ಕೂಡ ಟಿಕೆಟ್ ಆಕಾಂಕ್ಷಿ. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರನ್ನು ಗೆಲ್ಲಿಸುತ್ತೇವೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ನಿರ್ಧಾರವೇ ನಮ್ಮ ನಿರ್ಧಾರ” ಎಂದು ಹೇಳಿದರು.
ಲಕ್ಷ್ಮಣ ಸವದಿ ಪಕ್ಷ ಬಿಡುವುದಿಲ್ಲ
ಎಲ್ಲ ಪಕ್ಷಗಳು ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತೇವೆ. ನಾವು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುತ್ತಿದ್ದೇವೆ. ಲಕ್ಷ್ಮಣ ಸವದಿ ಪಕ್ಷ ಬಿಡುವ ವಿಚಾರ ಸುಳ್ಳು” ಎಂದರು.