ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಮೇಲೆ ರಾಜ್ಯದ 10 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ವಿವಿಧ ಇಲಾಖೆಗಳ ಹತ್ತು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ಹತ್ತು ಜಿಲ್ಲೆಗಳಲ್ಲಿ ನಸುಕಿನ ವೇಳೆಯಲ್ಲಿ ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ 40 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ಸ್ಥಿರ ಮತ್ತು ಚರ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಯಾರ ಮೇಲೆ ದಾಳಿ?
ಚಾಮರಾಜನಗರದ ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಪಿ. ರವಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಯಜೇಂದ್ರ, ಬಳ್ಳಾರಿಯ ಸಹಾಯಕ ಪ್ರಾಧ್ಯಾಪಕ ಬಿ. ರವಿ, ವಿಜಯನಗರ ಜಿಲ್ಲೆಯ ಇಂಧನ ಇಲಾಖೆ ಅಧಿಕಾರಿ ಭಾಸ್ಕರ್ ಮತ್ತು ಮಂಗಳೂರಿನ ಮೆಸ್ಕಾಂ ಅಧಿಕಾರಿ ಶಾಂತಕುಮಾರ್, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಎಂಜಿನಿಯರ್ ಹನುಮಂತರಾಯಪ್ಪ, ಲೋಕೋಪಯೋಗಿ ಇಲಾಖೆಯ ಮಂಡ್ಯ ವಿಭಾಗದ ಎಂಜಿನಿಯರ್ ಹರ್ಷ, ಚಿಕ್ಕಮಗಳೂರಿನ ವಾಣಿಜ್ಯ ತೆರಿಗೆ ಅಧಿಕಾರಿ ನೇತ್ರಾವತಿ, ಹಾಸನದ ಆಹಾರ ನಿರೀಕ್ಷಕ ಜಗನ್ನಾಥ್ ಜಿ., ಕೊಪ್ಪಳ ಅರಣ್ಯ ಇಲಾಖೆ ಅಧಿಕಾರಿ ರೇಣುಕಮ್ಮ ಅವರಿಗೆ ಸಂಬಂಧಿಸಿದ 40 ಸ್ಥಳಗಳ ಮೇಲೆ ದಾಳಿ ನಡೆದಿದೆ.