ಪ್ರಾಮಾಣಿಕ ರಾಜಕಾರಣಕ್ಕೆ ಶಾಶ್ವತ ಸಾಕ್ಷಿಯಂತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತರತ್ನ’ (ಮರಣೋತ್ತರ) ಪುರಸ್ಕಾರ ದೊರೆತಿದೆ.
ಕರ್ಪೂರಿ ಅವರ ಜನ್ಮಶತಮಾನೋತ್ಸವಕ್ಕೆ ಮುನ್ನಾದಿನ (ಜ. 23) ರಾಷ್ಟ್ರಪತಿ ದೌಪದಿ ಮುರ್ಮು ಅವರು ಘೋಷಣೆ ಮಾಡಿದ್ದಾರೆ. “ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಸಂತಸವಾಗುತ್ತಿದೆ” ಎಂದು ರಾಷ್ಟ್ರಪತಿಗಳು ತಿಳಿಸಿದ್ದಾರೆ.
ಕರ್ಪೂರಿ ಠಾಕೂರ್ ದೇಶದ ಮೊದಲ ಅಹಿಂದ ನಾಯಕರಾಗಿದ್ದು, ಲೋಹಿಯಾ ಸಮಾಜವಾದದ ಮತ್ತೊಂದು ಕೊಂಡಿ. ಹಿಂದುಳಿದವರಲ್ಲಿ ಹಿಂದುಳಿದವರನ್ನು ಒಳ ಮೀಸಲಾತಿಯ ಮೂಲಕ ಮೇಲೆತ್ತುವ ಮಹಾನ್ ಕ್ರಾಂತಿಗೆ 70ರ ದಶಕದಲ್ಲೇ ಮುನ್ನುಡಿ ಬರೆದ ಮಹಾನ್ ಪರಿವರ್ತನಾವಾದಿ ಎಂದೇ ಠಾಕೂರ್ ಖ್ಯಾತರಾಗಿದ್ದಾರೆ.
ಬಿಹಾರದಂತಹ ಬಿಹಾರದಲ್ಲಿ ಸಮಾಜವಾದದ ಮುನ್ನೆಲೆಯಿಂದ ಜನತಾ ಪರಿವಾರದ ಧೀಮಂತ ನಾಯಕ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು 1952ರಲ್ಲಿ ಸಮಾಜವಾದಿ ಪಕ್ಷದ ಶಾಸಕರಾಗಿ ಬಿಹಾರ ವಿಧಾನಸಭೆ ಪ್ರವೇಶಿಸಿದ್ದರು. ಚುನಾವಣೆಯಲ್ಲಿ ಒಮ್ಮೆಯೂ ಸೋಲದ ಅವರು ಉಪಮುಖ್ಯಮಂತ್ರಿ ಹುದ್ದೆಗೇರಿದರಲ್ಲದೆ, ಎರಡು ಭಾರಿ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಜನ ನಾಯಕ ಎಂದು ಆ ಕಾಲಕ್ಕೆ ಫೇಮಸ್ ಆಗಿದ್ದವರು.
ಶಿಕ್ಷಕನಾಗಿ ವೃತ್ತಿ ಆರಂಭಿಸಿ ರಾಜಕಾರಣದ ಹೆಡ್ ಮಾಸ್ಟರ್ ಪಟ್ಟಕ್ಕೆ ಬಂದು ಕುಳಿತ ಕರ್ಪೂರಿ ಠಾಕೂರ್ ಅವರು 1970ರ ದಶಕದ ಕೊನೆಯಲ್ಲಿ ಮುಂಗೇರಿ ಲಾಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಪ್ರಯತ್ನವನ್ನು ಕರ್ಪೂರಿ ಮಾಡಿದ್ದರು ಈ ಮೂಲಕ ಹಿಂದುಳಿದವರು ಅತಿ ಹಿಂದುಳಿದವರು ಮಹಿಳೆಯರು ಮತ್ತು ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 26ರಷ್ಟು ಮೀಸಲಾತಿಯನ್ನು ನೀಡುವ ಒಳ ಮೀಸಲಾತಿ ಕಲ್ಪಿಸಲು ಯತ್ನಿಸಿದ ಮಹಾನ್ ನಾಯಕ.
ಮೂಲತಃ ಕ್ಷೌರಿಕ
ಕರ್ಪೂರಿ ಅವರು ಮೂಲತಃ ಹಿಂದುಳಿದ ವರ್ಗಕ್ಕೆ ಸೇರಿದವರು. 1924ರ ಜನವರಿ 24ರಂದು ಕ್ಷೌರಿಕ ಸಮುದಾಯದಲ್ಲಿ ಜನಿಸಿದವರು. ಬಾಲ್ಯದಿಂದಲೂ ಬುದ್ದಿವಂತ ಹಾಗೂ ಅತ್ಯುತ್ತಮ ಮಾತುಗಾರರಾಗಿದ್ದ ಅವರ ಪ್ರತಿಭೆಯನ್ನು ನೋಡಿ ಹಿರಿಯೊಬ್ಬರು ಅವರಿಗೆ ಠಾಕೂರ್ ಎಂಬ ಬಿರುದನ್ನು ನೀಡಿದರು. ಅದು ಅವರ ಹೆಸರಿನ ಜೊತೆಗೆ ಶಾಶ್ವತವಾಗಿ ಅಂಟಿಕೊಂಡಿದೆ.
ಕರ್ಪೂರಿ ಠಾಕೂರ್ ತಾವು ಪಿ.ಯು.ಸಿ. ಮುಗಿಸಿ ಡಿಗ್ರಿ ಓದುವ ದಿನಗಳಲ್ಲಿಯೂ ಸಹ ತಮ್ಮ ಹಳ್ಳಿಯಲ್ಲಿ ಸೈಕಲ್ ಪ್ರಯಾಣ ಮಾಡುವಂತಿರಲಿಲ್ಲ. ಅಂತಹ ಜಾತಿಯತೆಯ ಅಸಮಾನತೆಯನ್ನು ಅನುಭವಿಸಿದ್ದರು.
ಆಶ್ಚರ್ಯಕರ ಸಂಗತಿ ಎಂದರೆ, ಠಾಕೂರ್ ಎಂಬ ಮೇಲ್ವರ್ಗದ ಹೆಸರು ಅವರಿಗೆ ಬಂದಿದ್ದು.
ತಳ ಸಮುದಾಯದಿಂದ ಬಂದ ಕರ್ಪೂರಿ ಠಾಕೂರ್ ಅವರಿಗೆ ಕೇಂದ್ರ ಸರ್ಕಾರ ಶತಮಾನೋತ್ಸವದ ಹೊತ್ತಿನಲ್ಲಿ “ಭಾರತರತ್ನ” ಪುರಸ್ಕಾರ ನೀಡಿ ಮರಣೋತ್ತರವಾಗಿ ಗೌರವಿಸುತ್ತಿರುವುದು ಎಲ್ಲ ಧಮನಿತ ಸಮುದಾಯಗಳು ಸಂಭ್ರಮಿಸುವ ದಿನ ಎನ್ನಬಹುದು.
ಹಿಂದುಳಿದವರ ಆಶಾಕಿರಣಕ್ಕೆ ಈಗಲಾದರೂ ದೇಶದ ಅತ್ಯುನ್ನತ ಗೌರವ ಸಂದಿರುವುದಕ್ಕೆ ತೃಪ್ತಿ ಪಡುವ ಸಂಗತಿ. ಪ್ರಾಮಾಣಿಕ ರಾಜಕಾರಣಕ್ಕೆ ಭೂಷಣರಂತಿದ್ದ ಕರ್ಪೂರಿ ಠಾಕೂರ್ ಈ ತಲೆಮಾರಿನ ರಾಜಕಾರಣಿಗಳಿಗೆ ಮಾದರಿಯಾಗಲಿ. “ಭಾರತರತ್ನ” ದೊರೆತ ಈ ಕ್ಷಣದಲ್ಲಿ ಅವರನ್ನು ಎಲ್ಲರೂ ಸ್ಮರಿಸಬೇಕಿದೆ.