ಒಲಂಪಿಕ್ ಮತ್ತು ಪ್ಯಾರಾ ಒಲಂಪಿಕ್ ಕ್ರೀಡೆಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಪದಕ ವಿಜೇತರಾದಲ್ಲಿ ಈ ಹಿಂದೆ ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗ ಪಡೆಯಲು ಶೇ.2ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು, ಆದರೆ ನಮ್ಮ ಸಿದ್ದರಾಮಯ್ಯ ಸರ್ಕಾರ ಕ್ರೀಡಾಪಟುಗಳ ಬಗ್ಗೆ ವಿಶೇಷ ಕಾಳಜಿ ಎಲ್ಲ ಇಲಾಖೆಗಳಲ್ಲಿ ಶೇ.2 ಮೀಸಲಾತಿ ನೀಡಿ ಅವರ ಜೀವನೋಪಾಯಕ್ಕಾಗಿ ಉದ್ಯೋಗ ಪಡೆಯಲು ಸಹಕಾರ ನೀಡಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ. ನಾಗೇಂದ್ರ ತಿಳಿಸಿದರು.
ಶನಿವಾರ ಮಂಗಳೂರು ನಗರದ ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ಮಾಸ್ಟರ್ಸ್ ಆಥ್ಲೆಟಿಕ್ ಅಸೋಶೇಷನ್ ವತಿಯಿಂದ ಆಯೋಜಿಸಿದ್ದ 42 ನೇ ರಾಜ್ಯ ಮಟ್ಟದ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟನೆ ಮಾಡಿ ಮಾತನಾಡಿದರು.
“ಈಗಾಗಲೇ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಇರುವ ಸ್ಥಳೀಯ ಕ್ರೀಡೆಗಳನ್ನು ಗೌರವಿಸಿ ಒಂದು ಜಿಲ್ಲೆ – ಒಂದು ಕ್ರೀಡೆ ಎನ್ನುವ ಘೋಷ ವಾಕ್ಯದಲ್ಲಿ ಸ್ಥಳೀಯ ಕ್ರೀಡೆಗಳನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ಯಲು ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಉತ್ತಮ ಕೆಲಸಕ್ಕೆ ಮುಂದಾಗಿದ್ದೇವೆ” ಎಂದರು.
“ನಾನು ಯುವ ಕ್ರೀಡಾಪಟುಗಳನ್ನು ನೋಡಿದ್ದೇ ಆದರೆ ಇಂದು ವಿಶೇಷವಾಗಿ 30 ರಿಂದ 90 ವರ್ಷದವರೆಗಿನ ಕ್ರೀಡಾ ಸಾಧಕರನ್ನು ನೋಡಿ ಬಹಳ ಸಂತೋಷ ತಂದಿದೆ. 2 ದಿನಗಳ ಕಾಲ ರಾಜ್ಯದ 31 ಜಿಲ್ಲೆಗಳಿಂದ ಸಾವಿರಾರು ಕ್ರೀಡಾಪಟುಗಳು & ಕ್ರೀಡಾಭಿಮಾನಿಗಳು ಆಗಮಿಸಿರುವ ಈ ಕ್ರೀಡಾಕೂಟದಲ್ಲಿ 30 ರಿಂದ 90 ವರ್ಷದ ವರೆಗಿನ ಮಹಿಳಾ ಮತ್ತು ಪುರುಷ ಅಥ್ಲೆಟ್ ಗಳು ಪಾಲ್ಗೊಂಡಿದ್ದಾರೆ” ಎಂದರು.