ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸತ್ ಕಲಾಪದಲ್ಲಿ ಭಾಗವಹಿಸಿ ದೇಶದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ದೇವೇಗೌಡರ ಕುಟುಂಬದೊಂದಿಗೆ ಸೇರಿ ರಾಜಕೀಯ ಲಾಭ ಹುಡುಕುವುದೇ ಪ್ರಾಶಸ್ತ್ಯದ ಕೆಲಸ! ಎಂದು ಕಾಂಗ್ರೆಸ್ ಕುಟುಕಿದೆ.
ಈ ಕುರಿತು ಎಕ್ಸ್‌ನಲ್ಲಿ ಮೋದಿ ಅವರನ್ನು ಟೀಕಿಸಿ ಪೋಸ್ಟ್ ಮಾಡಿರುವ ಕಾಂಗ್ರೆಸ್, “ಭದ್ರತಾ ವೈಫಲ್ಯದಿಂದ ಸಂಸತ್ ಭವನ ಅಪಾಯದಲ್ಲಿದೆ, ವಿಪಕ್ಷ ಸಂಸದರ ಅನೈತಿಕ ಅಮಾನತಿನಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದು ಹರಿಹಾಯ್ದಿದೆ.
“ಕುಟುಂಬ ರಾಜಕಾರಣ ವಿರೋಧಿಸಿ ಬೂಟಾಟಿಕೆಯ ಮಾತಾಡುವ ಮೋದಿಯವರು “ದೇವೇಗೌಡರ ರಾಜಕೀಯ ಕುಟುಂಬ”ದೊಂದಿಗೆ ಪೋಸ್ ಕೊಡುವ ಮೂಲಕ ತಮ್ಮನ್ನು ತಾವೇ ವ್ಯಂಗ್ಯ ಮಾಡಿಕೊಳ್ಳುತ್ತಿದ್ದಾರೆ” ಎಂದು ಲೇವಡಿ ಮಾಡಿದೆ.
ನರೇಂದ್ರ ಮೋದಿ ಅವರೇ, ಬಹಳ ದಿನಗಳ ಬೇಡಿಕೆಯ ನಂತರ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಕ್ಕೆ ಧನ್ಯವಾದಗಳು. ಮಾಜಿ ಪ್ರಧಾನಿ ದೇವೇಗೌಡರನ್ನು ಕರೆಸಿಕೊಂಡು ಭೇಟಿಯಾಗಿದ್ದಕ್ಕೂ ಧನ್ಯವಾದಗಳು. ನಿಮ್ಮ ಹೊಸ ಬ್ರದರ್ ಕುಮಾರಸ್ವಾಮಿಯವರನ್ನು ಕರೆಸಿಕೊಂಡು ಭೇಟಿಯಾಗಿದ್ದಕ್ಕೂ ಧನ್ಯವಾದಗಳು. ನಿಮ್ಮ ಹೊಸ ಬ್ರದರ್‌ನ ಬ್ರದರ್ ರೇವಣ್ಣನವರನ್ನು ಹಾಗೂ ಅವರ ಮಗನನ್ನು ಭೇಟಿಯಾಗಿದ್ದಕ್ಕೂ ಧನ್ಯವಾದಗಳು. ಹೀಗೆಯೇ ಕರ್ನಾಟಕದ ಮರ್ಯಾದೆ ತೆಗೆದಿರುವ ನಿಮ್ಮ ಸಂಸದ ಪ್ರತಾಪ್ ಸಿಂಹನನ್ನು ‘ಕರೆಸಿಕೊಂಡು ಯಾಕಪ್ಪಾ ಸಂಸತ್ತಿನ ಭದ್ರತೆಯನ್ನು ಪರೀಕ್ಷೆ ಮಾಡಿದೆ? ಯಾಕಪ್ಪಾ ದಾಳಿಕೋರರೊಂದಿಗೆ ಕೈಜೋಡಿಸಿದೆ?’ ಎಂದು ಕೇಳುವುದು ಯಾವಾಗ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.