ಬೆಳಗಾವಿ: ಬಿಡಿಎ, ಬಿಬಿಎಂಪಿ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೆ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರು ಬಿಡಿಎ ಅಧೀನದಲ್ಲಿ ಇರುವ ಉದ್ಯಾನಗಳ ಸಂಖ್ಯೆ ಮತ್ತು ಉದ್ಯಾನಗಳ ಒತ್ತುವರಿಯ ಬಗ್ಗೆ ಕೇಳಿದ ಪ್ರಶ್ನೆಗೆ ಡಿ ಕೆ ಶಿವಕುಮಾರ್ ಅವರು ಉತ್ತರಿಸಿದರು.
“ನಮ್ಮ ಸರ್ಕಾರ ಅಧಿಕಾರವಹಿಸಿಕೊಂಡ ತಕ್ಷಣ ಬೆಂಗಳೂರಿನ ಆಸ್ತಿಗಳನ್ನು ಹೊಸ ತಂತ್ರಜ್ಞಾನದ ಮೂಲಕ ಮ್ಯಾಪಿಂಗ್ ಕೆಲಸ ಮಾಡುತ್ತಿದೆ. ಒಂದಷ್ಟು ಆಸ್ತಿ ವ್ಯಾಜ್ಯಗಳು ನ್ಯಾಯಾಲಯದಲ್ಲಿವೆ. ಸರ್ಕಾರಿ ಆಸ್ತಿಗಳನ್ನು ಉಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬಳಕೆ ಮಾಡಲಾಗುವುದು” ಎಂದರು.
“ಒತ್ತುವರಿಯ ಬಗ್ಗೆ ನಿಮ್ಮ ಬಳಿ ನಿರ್ದಿಷ್ಟ ದಾಖಲೆಗಳು ಇದ್ದರೆ ಈಗಲೇ ಕೊಡಿ, ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಸಂದರ್ಭ ಬರುವುದಿಲ್ಲ” ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಪ್ರಭಾವಿಗಳ ಹೆಸರು ಹೇಳಿಕೊಂಡು ಪಾರ್ಕ್ ನಿರ್ಮಾಣವಾಗಬೇಕಿದ್ದ ಜಾಗದಲ್ಲಿ ನಮ್ಮ ಸ್ವತ್ತು ಎಂದು ಯಾರೋ ಬೋರ್ಡ್ ಹಾಕಿದ್ದಾರೆ. ಇದೇ ರೀತಿ ಅನೇಕ ಉದ್ಯಾನದ ಜಾಗಗಳು ಒತ್ತುವರಿಯಾಗಿವೆ ಎಂದು ಶಾಸಕರು ಹೇಳಿದಾಗ ಡಿಸಿಎಂ ಅವರು, “ಶಾಸಕ ಮುನಿರತ್ನ ಅವರು ಹೇಳಿರುವ ಕೊಟ್ಟಿಗೆಪಾಳ್ಯ ವಾರ್ಡ್ ನಂಬರ್ 73ರ ಸರ್ವೆ ನಂಬರ್ 19 ಅನ್ನು ಯಾರೋ ಒಬ್ಬರು ತಮಗೆ ಸೇರಿದ್ದು ಎಂದು ಕೆಳ ನ್ಯಾಯಲಯದಲ್ಲಿ ಆದೇಶ ಪಡೆದುಕೊಂಡು ಬಂದಿದ್ದಾರೆ. ಶೀಘ್ರವೇ ಈ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.
ಪ್ರಮೋದ್ ಲೇಔಟ್ ಸೇರಿದಂತೆ ಇತರೆಡೆ ಪ್ರಭಾವಿಗಳ ಜೊತೆ ಇರುವ ಫೋಟೋ ತೋರಿಸಿ ಭೂಮಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದ ಶಾಸಕ ಮುನಿರತ್ನ ಅವರಿಗೆ “ನಿನಗಿಂತ ಪ್ರಭಾವಿ ಯಾರಿದ್ದಾರಪ್ಪ” ಎಂದು ಡಿಸಿಎಂ ಅವರು ಕಾಲೆಳೆದರು.