ಪಿಎಸ್‌ಐ ನೇಮಕಾತಿ ಹಗರಣದ ಸಂದರ್ಭದಲ್ಲಿ ಸಿಐಡಿ ನೋಟಿಸ್ ನೀಡಿದಾಗ ಸಚಿವ ಪ್ರಿಯಾಂಕ್ ಖರ್ಗೆ ಅವರು ಏಕೆ ಉತ್ತರ ನೀಡಲಿಲ್ಲ? ಆಗ ಸಂವಿಧಾನ ಎಲ್ಲಿ ಹೋಗಿತ್ತು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಗರದ ಜೆ.ಪಿ. ಭವನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಹಿಟ್ ಅಂಡ್ ರನ್ ಮಾಡಿಲ್ಲ. ಪ್ರತಿ ಬಾರಿಯೂ ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡಿದ್ದೇನೆ. 543 ಪಿಎಸ್‌ಐ ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಯಾವ ದಾಖಲೆಗಳನ್ನು ನೀಡಿದ್ದರು?” ಎಂದು ಪ್ರಶ್ನಿಸಿದರು.
ಪಿಎಸ್‌ಐ ಹಗರಣದ ಸಂದರ್ಭದಲ್ಲಿ ತಮ್ಮ ಬಳಿ ಎಲ್ಲಾ ದಾಖಲೆಗಳು, ಆಡಿಯೋ ಮತ್ತು ವಿಡಿಯೋಗಳಿವೆ ಎಂದು ಹೇಳಿದ್ದ ಪ್ರಿಯಾಂಕ್ ಖರ್ಗೆ, ತನಗೆ ಸಿಐಡಿ ನೋಟಿಸ್ ನೀಡಿದ್ದೇಕೆ ಎಂದು ಪ್ರಶ್ನಿಸಿ 2022ರ ಏಪ್ರಿಲ್ 28ರಂದು ಸಿಐಡಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಆ ಮೂರು ಪುಟಗಳ ಪತ್ರದಲ್ಲಿ ಏನೇನು ಉಲ್ಲೇಖಿಸಿದ್ದರು ಎಂಬುದನ್ನು ಅವರು ನೆನಪಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
“ಇಷ್ಟೆಲ್ಲ ಇತಿಹಾಸ ಹೊಂದಿರುವ ಪ್ರಿಯಾಂಕ್ ಖರ್ಗೆ ಅವರು, ಅಂದು ಸಿಐಡಿ ನೋಟಿಸ್‌ಗೆ ಏಕೆ ಉತ್ತರ ನೀಡಲಿಲ್ಲ? ಆಗ ಸಂವಿಧಾನ ಎಲ್ಲಿ ಹೋಗಿತ್ತು? ನೋಟಿಸ್ ನೀಡಲಿ, ಕೊಟ್ಟರೆ ಏನು ಮಾಡುತ್ತಾರೆ? ಸರ್ಕಾರ ಏನು ಮಾಡುತ್ತಿದೆ? ನಾನು ಹೇಳುತ್ತಿರುವುದೆಲ್ಲವೂ ಸಾರ್ವಜನಿಕ ವಲಯದಲ್ಲಿದೆ ಎಂದು ಅಂದು ಹೇಳಿದ್ದ ವ್ಯಕ್ತಿ, ಇಂದು ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ಈ ಹಿಂದೆ ಸಿಐಡಿ ಪ್ರಿಯಾಂಕ್ ಖರ್ಗೆ ಅವರಿಗೆ ನೀಡಿದ್ದ ನೋಟಿಸ್ ಹಾಗೂ ಅದಕ್ಕೆ ಖರ್ಗೆ ಅವರು ಸಲ್ಲಿಸಿದ್ದ ಉತ್ತರದ ಪ್ರತಿಗಳನ್ನು ಕುಮಾರಸ್ವಾಮಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.


