Homeಕರ್ನಾಟಕರಾಜ್ಯದ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ

ರಾಜ್ಯದ ಜಿಡಿಪಿಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ಜಿಲ್ಲೆ ದಕ್ಷಿಣ ಕನ್ನಡ: ಪ್ರಿಯಾಂಕ್ ಖರ್ಗೆ

ಕರ್ನಾಟಕದ ಪ್ರಾದೇಶಿಕ ಅಭಿವೃದ್ಧಿಯ ಅಂತರವನ್ನು ಕಡಿಮೆ ಮಾಡುವಲ್ಲಿ ಮಂಗಳೂರು ಮಹತ್ವದ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ. ಮಂಗಳೂರನ್ನು ಪ್ರಮುಖ ತಂತ್ರಜ್ಞಾನ ಮತ್ತು ಆರ್ಥಿಕ ಬೆಳವಣಿಗೆಯ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸುವಂತೆ ಕರ್ನಾಟಕದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಉದ್ಯಮ ವಲಯದ ನಾಯಕರಿಗೆ ಕರೆ ನೀಡಿದರು.

ಮಂಗಳೂರಿನಲ್ಲಿ ಡೆಲಾಯ್ಟ್ ಸಂಸ್ಥೆಯ ಭಾರತದ 27ನೇ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಬೆಂಗಳೂರು ನಂತರ ಕರ್ನಾಟಕದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಎರಡನೇ ಅತಿ ಹೆಚ್ಚು ಕೊಡುಗೆ ನೀಡುವ ಜಿಲ್ಲೆಯಾಗಿ ದಕ್ಷಿಣ ಕನ್ನಡ ಗುರುತಿಸಿಕೊಂಡಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಜಿಲ್ಲೆಯ ಕೊಡುಗೆ ಶೇ.5.3ರಷ್ಟಿದೆ ಎಂದು ತಿಳಿಸಿದರು. ಈ ಆರ್ಥಿಕ ಶಕ್ತಿ, ಈ ಭಾಗದ ಪ್ರತಿಭಾನ್ವಿತ ಮಾನವ ಸಂಪನ್ಮೂಲ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಉತ್ತಮ ಜೀವನಮಟ್ಟದೊಂದಿಗೆ ಮಂಗಳೂರು, ಕರ್ನಾಟಕದ ಮುಂದಿನ ಹಂತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

“ಕರ್ನಾಟಕದ ಪ್ರಮುಖ ಆರ್ಥಿಕ ಬೆಳವಣಿಗೆಯ ಕೇಂದ್ರವಾಗಿ ಹೊರಹೊಮ್ಮುವ ಅಪಾರ ಸಾಮರ್ಥ್ಯ ಮಂಗಳೂರಿಗಿದೆ. ಬಿಯಾಂಡ್ ಬೆಂಗಳೂರು ಮೂಲಕ ಪ್ರತಿಭೆಗಳು ಈಗಾಗಲೇ ಇರುವ ಪ್ರದೇಶಗಳಿಗೆ ಅವಕಾಶಗಳನ್ನು ಕೊಂಡೊಯ್ಯುವುದು ನಮ್ಮ ಉದ್ದೇಶವೇ ಹೊರತು, ಪ್ರತಿಭೆಗಳು ಬೆಂಗಳೂರಿಗೆ ಬರಬೇಕೆಂದು ನಿರೀಕ್ಷಿಸುವುದಲ್ಲ. ನಮ್ಮ ಪ್ರಾದೇಶಿಕ ನಗರಗಳಲ್ಲಿರುವ ಸಾಮರ್ಥ್ಯವನ್ನು ಉದ್ಯಮಗಳು ಗುರುತಿಸಿ, ಸದೃಢ ಆರ್ಥಿಕ ವ್ಯವಸ್ಥೆಗಳನ್ನು ನಿರ್ಮಿಸುವಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು,” ಎಂದು ಸಚಿವರು ಹೇಳಿದರು.

ಮಂಗಳೂರಿನಲ್ಲಿ ತನ್ನ ಕಚೇರಿಯನ್ನು ಸ್ಥಾಪಿಸುವ ಡೆಲಾಯ್ಟ್ ಸಂಸ್ಥೆಯ ನಿರ್ಧಾರವನ್ನು ಶ್ಲಾಘಿಸಿದ ಖರ್ಗೆ, ಈ ಹೂಡಿಕೆಯು ಸರ್ಕಾರದ ಬಿಯಾಂಡ್ ಬೆಂಗಳೂರು ದೃಷ್ಟಿಕೋನದಡಿ ಉತ್ತೇಜಿಸಲು ಬಯಸುತ್ತಿರುವ ಉದ್ಯಮ ವಲಯದ ಪಾಲ್ಗೊಳ್ಳುವಿಕೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.

“ಈ ಕಾರ್ಯ ಸಾಕಾರಗೊಳ್ಳಲು ವಿಶೇಷವಾಗಿ ಶ್ರಮಿಸಿದ ರೋಮಲ್ ಶೆಟ್ಟಿ ಮತ್ತು ಡೆಲಾಯ್ಟ್‌ನ ಇಡೀ ತಂಡವನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಸರ್ಕಾರದ ಬಿಯಾಂಡ್ ಬೆಂಗಳೂರು ನೀತಿ ಉತ್ತೇಜಿಸಲು ಬಯಸುತ್ತಿರುವ ಉದ್ಯಮ ಸಹಭಾಗಿತ್ವ ಮತ್ತು ಬದ್ಧತೆ ಇದೇ ರೀತಿಯದ್ದಾಗಿದೆ. ಮಂಗಳೂರಿನಲ್ಲಿ ಅಪಾರ ಸಾಮರ್ಥ್ಯವಿದೆ ಎಂದು ನಾನು ಭಾವಿಸುತ್ತೇನೆ. ಇಂತಹ ಉಪಕ್ರಮಗಳು ಈ ಭಾಗದ ಅವಕಾಶಗಳನ್ನು ಅನಾವರಣಗೊಳಿಸಲು ನೆರವಾಗಲಿವೆ. ರೋಮಲ್ ಮತ್ತು ಡೆಲಾಯ್ಟ್‌ನ ಇಡೀ ತಂಡಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ,” ಎಂದು ಅವರು ಹೇಳಿದರು.

ಬಿಯಾಂಡ್ ಬೆಂಗಳೂರು: ಪ್ರಾದೇಶಿಕ ನಗರಗಳಿಗೆ ಬೆಳವಣಿಗೆಯ ಅವಕಾಶ

ಸರ್ಕಾರದ ಬಿಯಾಂಡ್ ಬೆಂಗಳೂರು ಕಾರ್ಯತಂತ್ರವನ್ನು ವಿವರಿಸಿದ ಖರ್ಗೆ, ವಿವಿಧ ಪ್ರದೇಶಗಳ ಸಾಮರ್ಥ್ಯ ಮತ್ತು ಶಕ್ತಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಬಹು ಆರ್ಥಿಕ ಬೆಳವಣಿಗೆಯ ಕೇಂದ್ರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.

ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ನಗರದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯನ್ನು ಉಲ್ಲೇಖಿಸಿದ ಅವರು, ಈ ಭಾಗದ ಪ್ರಮುಖ ಬೆಳವಣಿಗೆಯ ಅವಕಾಶಗಳನ್ನು ಗುರುತಿಸಲಾಗಿದ್ದು, ಪ್ರದೇಶದ ಅಭಿವೃದ್ಧಿಗಾಗಿ ಸುಮಾರು ₹6,000 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಆರ್ಥಿಕತೆಯ ವೇಗವರ್ಧನೆ ಕಾರ್ಯಕ್ರಮ (ಲೀಪ್) ಮೂಲಕ ಸ್ಥಳೀಯ ಸಾಮರ್ಥ್ಯಗಳನ್ನು ಗುರುತಿಸುವುದು, ಹೂಡಿಕೆಗಳಿಗೆ ಅವಕಾಶ ಕಲ್ಪಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶ ಹೊಂದಿರುವುದಾಗಿ ಸಚಿವರು ತಿಳಿಸಿದರು.

“ಮಂಗಳೂರಿನಲ್ಲಿ ಅತ್ಯಂತ ಚುರುಕಾದ ಪ್ರತಿಭಾನ್ವಿತ ಮಾನವ ಸಂಪನ್ಮೂಲವಿದ್ದು, ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳು ಈ ಭಾಗಕ್ಕೆ ಬೆಂಬಲವಾಗಿವೆ. ಬೇರೆಡೆಗಳಲ್ಲಿ ಮರುಸೃಷ್ಟಿಸಲು ಕಷ್ಟವಾಗುವಂತಹ ಉತ್ತಮ ಜೀವನಮಟ್ಟವೂ ಇಲ್ಲಿದೆ. ಸಾಫ್ಟ್‌ವೇರ್ ಸಂಸ್ಥೆ ಇಜಿಯ ಡೆನ್ಮಾರ್ಕ್ ತಂಡವೊಂದು ಬೆಳಿಗ್ಗೆ ಸಸಿಹಿತ್ಲು ಕಡಲತೀರದಲ್ಲಿ ಅಲೆಗಳ ಮೇಲೆ ಸವಾರಿ ಮಾಡಿ, ನಂತರ ಕಚೇರಿಗೆ ಬಂದು ಕೆಲಸ ಮಾಡುವುದನ್ನು ನಾನು ಗಮನಿಸಿದ್ದೇನೆ. ಇಂತಹ ಅನುಕೂಲ ಬೇರೆ ಯಾವ ನಗರದಲ್ಲಿದೆ? ಇಂತಹ ಶಕ್ತಿಗಳನ್ನು ನಾವು ಬಳಸಿಕೊಳ್ಳಬೇಕು,” ಎಂದು ಅವರು ಹೇಳಿದರು.

ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ವಲಸಿಗರನ್ನು ಆಕರ್ಷಿಸುತ್ತಿರುವುದರಿಂದ ಬೆಂಗಳೂರಿನ ಮೇಲೆ ಹೆಚ್ಚುತ್ತಿರುವ ಒತ್ತಡವನ್ನೂ ಅವರು ಪ್ರಸ್ತಾಪಿಸಿದರು. ಉತ್ತಮ ಉದ್ಯೋಗಾವಕಾಶಗಳಿರುವ ಇತರ ನಗರ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದರಿಂದ ರಾಜ್ಯದಾದ್ಯಂತ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ಸಮಾನವಾಗಿ ಹಂಚಿಕೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಉದ್ಯಮ ಸಹಭಾಗಿತ್ವ

ಭವಿಷ್ಯದ ಅಗತ್ಯಗಳಿಗೆ ಸಿದ್ಧವಾಗಿರುವ ಮಾನವ ಸಂಪನ್ಮೂಲವನ್ನು ರೂಪಿಸುವಲ್ಲಿ ಉದ್ಯಮ ವಲಯದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಒತ್ತಿಹೇಳಿದ ಸಚಿವರು, ಉದ್ಯಮ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರ ಹಲವು ಕೌಶಲ್ಯಾಭಿವೃದ್ಧಿ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ. ಪಠ್ಯಕ್ರಮ ರೂಪಿಸುವಲ್ಲಿ ಕಂಪನಿಗಳು ಪಾಲ್ಗೊಳ್ಳುವುದರ ಜೊತೆಗೆ, ತರಬೇತಿಯು ಬದಲಾಗುತ್ತಿರುವ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದರು.

ಮಂಗಳೂರಿನಲ್ಲಿಯೇ ಉದ್ಯಮಕ್ಕೆ ಸಿದ್ಧವಾಗಿರುವ ಪ್ರತಿಭೆಗಳನ್ನು ರೂಪಿಸಲು ಡೆಲಾಯ್ಟ್‌ನಂತಹ ಕಂಪನಿಗಳು ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

“ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಡೆಲಾಯ್ಟ್‌ನಂತಹ ಕಂಪನಿಯಲ್ಲಿ ಕೆಲಸ ಮಾಡಲು ಅಗತ್ಯವಾದ ಕೌಶಲ್ಯಗಳನ್ನು ಹೊಂದಿರಬಾರದೇ? ಉದ್ಯಮ ಮತ್ತು ಸರ್ಕಾರ ಒಟ್ಟಾಗಿ ಸಾಧಿಸಬಹುದಾದ ಅತ್ಯಂತ ಸುಲಭವಾದ ಅವಕಾಶವಿದು. ನಮ್ಮ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಪ್ರತಿಭೆಗಳು ಇಲ್ಲಿಯೇ ಸೃಷ್ಟಿಯಾಗುತ್ತಿರುವ ಉದ್ಯೋಗಾವಕಾಶಗಳಿಗೆ ಸಿದ್ಧರಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು,” ಎಂದು ಅವರು ಹೇಳಿದರು.

ಆರೋಗ್ಯ ಸೇವೆ ಮತ್ತು ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಈ ಪ್ರದೇಶ ಹೊಂದಿರುವ ಬಲವನ್ನು ಗಮನದಲ್ಲಿಟ್ಟುಕೊಂಡು, ಮಂಗಳೂರಿನಲ್ಲಿ ಆರೋಗ್ಯ ವಿಜ್ಞಾನಕ್ಕೆ ಆದ್ಯತೆ ನೀಡುವ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆಯೂ ಖರ್ಗೆ ಪ್ರಸ್ತಾಪಿಸಿದರು.

ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು

ಕರ್ನಾಟಕದ ಪ್ರಮುಖ ಎಲಿವೇಟ್ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ ಸಚಿವರು, ಅರ್ಹ ನವೋದ್ಯಮಗಳಿಗೆ ಯಾವುದೇ ಪಾಲುದಾರಿಕೆ ಹಕ್ಕನ್ನು ನೀಡುವ ಅಗತ್ಯವಿಲ್ಲದೆ ₹1 ಕೋಟಿವರೆಗೆ ಅನುದಾನ ಒದಗಿಸಲಾಗುತ್ತಿದೆ. ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ತಮ್ಮ ಉದ್ಯಮಗಳನ್ನು ನಿರ್ಮಿಸಲು ಮತ್ತು ವಿಸ್ತರಿಸಲು ಈ ಭಾಗದ ಉದ್ಯಮಿಗಳಿಗೆ ಅವರು ಪ್ರೋತ್ಸಾಹ ನೀಡಿದರು.

ನಗರ ಸಂಚಾರ ಸೇರಿದಂತೆ ಸಾರ್ವಜನಿಕ ವಲಯದ ಸವಾಲುಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ನವೋದ್ಯಮಗಳು ಸರ್ಕಾರದ ಸಹಭಾಗಿತ್ವದಲ್ಲಿ ತಮ್ಮ ನವೀನ ಪರಿಹಾರಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಅವಕಾಶ ಕಲ್ಪಿಸುವ ಸರ್ಕಾರದ ನಿಯಂತ್ರಣಾತ್ಮಕ ಪ್ರಯೋಗ ವ್ಯವಸ್ಥೆಯ ಬಗ್ಗೆಯೂ ಅವರು ವಿವರಿಸಿದರು.

ಈ ಉಪಕ್ರಮದಡಿ ಯಶಸ್ವಿಯಾಗುವ ಪ್ರಾಯೋಗಿಕ ಯೋಜನೆಗಳನ್ನು ಕರ್ನಾಟಕದಾದ್ಯಂತ ವಿಸ್ತರಿಸುವುದರ ಜೊತೆಗೆ ಇತರ ರಾಜ್ಯಗಳಿಗೂ ಕೊಂಡೊಯ್ಯುವ ಅವಕಾಶವಿದೆ. ಈಗಾಗಲೇ 16 ನವೋದ್ಯಮಗಳು ಈ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿದ್ದು, ಈ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಪ್ರಾದೇಶಿಕ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಖರ್ಗೆ, ಹೂಡಿಕೆಗಳಿಗೆ ಅನುಕೂಲ ಕಲ್ಪಿಸುವುದು, ಪ್ರತಿಭಾನ್ವಿತ ಮಾನವ ಸಂಪನ್ಮೂಲ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಕರಾವಳಿ ಕರ್ನಾಟಕದಲ್ಲಿ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಉದ್ಯಮ ವಲಯದ ನಾಯಕರಿಗೆ ಭರವಸೆ ನೀಡಿದರು.

“ಕರ್ನಾಟಕದ ಮುಂದಿನ ಹಂತದ ಬೆಳವಣಿಗೆ ನಮ್ಮ ಪ್ರಾದೇಶಿಕ ನಗರಗಳಿಂದ ಬರಬೇಕು. ಬೆಂಗಳೂರಿನ ಆಚೆಗೂ ಇರುವ ಅವಕಾಶಗಳನ್ನು ಉದ್ಯಮಗಳು ಗುರುತಿಸಿ, ರಾಜ್ಯದಾದ್ಯಂತ ಸದೃಢ ಮತ್ತು ಸುಸ್ಥಿರ ಆರ್ಥಿಕ ವ್ಯವಸ್ಥೆಗಳನ್ನು ನಿರ್ಮಿಸುವಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು ಎಂಬುದು ನಮ್ಮ ಆಶಯ,” ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments