Homeಕರ್ನಾಟಕಭಾಷಾಶಾಸ್ತ್ರಜ್ಞ, ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಡಾ. ಕೆ.ವಿ. ನಾರಾಯಣ ನಿಧನ

ಭಾಷಾಶಾಸ್ತ್ರಜ್ಞ, ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಡಾ. ಕೆ.ವಿ. ನಾರಾಯಣ ನಿಧನ

ಕನ್ನಡ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯ ಲೋಕಕ್ಕೆ ತಮ್ಮ ಅಪೂರ್ವ ಕೊಡುಗೆ ನೀಡಿದ ಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ, ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಡಾ. ಕೆ.ವಿ. ನಾರಾಯಣ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಅವರ ಅಗಲಿಕೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದ ಅವರು, ತಮ್ಮ ಆಳವಾದ ಅಧ್ಯಯನ ಮತ್ತು ವಿಶಿಷ್ಟ ಚಿಂತನೆಗಳ ಮೂಲಕ ಕನ್ನಡದ ಜ್ಞಾನ ಪರಂಪರೆಯನ್ನು ಶ್ರೀಮಂತಗೊಳಿಸಿದ್ದರು.

2024ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಷಾ ವಿಜ್ಞಾನಿ ಹಾಗೂ ವಿಮರ್ಶಕ ಪ್ರೊ.ಕೆ.ವಿ.ನಾರಾಯಣ ಭಾಜನರಾಗಿದ್ದರು. ಕೆ.ವಿ.ನಾರಾಯಣ ಅವರ ‘ನುಡಿಗಳ ಅಳಿವು’ ಎಂಬ ಸಾಹಿತ್ಯ ವಿಮರ್ಶಾ ಕೃತಿಗೆ ಪ್ರಶಸ್ತಿ ಲಭಿಸಿದೆ.

​ಡಾ. ಕೆ.ವಿ. ನಾರಾಯಣ ಅವರು 1948ರ ಅಕ್ಟೋಬರ್ 20ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಜನಿಸಿದರು. ಅವರ ತಾಯಿ ಕೆಂಚಮ್ಮ ಮತ್ತು ತಂದೆ ವೀರಣ್ಣ. ಪಿರಿಯಾಪಟ್ಟಣದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿ.ಯು.ಸಿ. ಓದಿದರು ಹಾಗೂ ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು. ಬಿ.ಎಡ್. ಮುಗಿಸಿದ ನಂತರ ಹೈಸ್ಕೂಲಿನಲ್ಲಿ ಅಧ್ಯಾಪನ ಆರಂಭಿಸಿದ ಅವರು, ಮುಂದೆ ಸ್ನಾತಕೋತ್ತರ ಸಾಹಿತ್ಯ ಓದಿಗಾಗಿ ಬೆಂಗಳೂರು ಸೇರಿದರು ಹಾಗೂ ಓದಿನ ಜೊತೆಯಲ್ಲೇ ಅವರ ಬರವಣಿಗೆಯ ಪಯಣವೂ ಸಾಗಿತು.

ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾ ನಿಕಾಯದ ಡೀನ್, ಕುಲಸಚಿವ ಮತ್ತು ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments