ಮತಗಳ್ಳತನ ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ‘ಸಾರ್ವಜನಿಕ ಜನಾಭಿಯೋಗ’ ಪ್ರಕ್ರಿಯೆಯನ್ನು ಇಂಡಿಯಾ ಮೈತ್ರಿಕೂಟ ಮುಂದೂಡಿದೆ.
ಶುಕ್ರವಾರ ಅಕ್ಟೋಬರ್ 30ರಂದು ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ದೆಹಲಿಯಲ್ಲಿ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಶನಿವಾರ ಅಕ್ಟೋಬರ್ 31ಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನವದೆಹಲಿಯ ನಿವಾಸದಲ್ಲಿ ಈ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು. ಈ ಹಿಂದೆ ಕಾರ್ಯಕ್ರಮ ನಡೆಸಲು ಸಂವಿಧಾನ ಕ್ಲಬ್ ಹಾಗೂ ತಲಕಟೋರಾ ಕ್ರೀಡಾಂಗಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಖರ್ಗೆ ಅವರ ನಿವಾಸವನ್ನು ಅಂತಿಮಗೊಳಿಸಲಾಗಿತ್ತು.
ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವ ಸಲುವಾಗಿ ಗುರುವಾರ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಸಭೆ ನಡೆಸಿದ್ದರು. ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್, ಟಿಎಂಸಿಯ ಡೆರೆಕ್ ಒಬ್ರಿಯಾನ್, ಸಮಾಜವಾದಿ ಪಕ್ಷದ ಹರೇಂದ್ರ ಮಲಿಕ್, ಜೆಎಂಎಂನ ಮಹುವಾ ಮಾಝಿ ಹಾಗೂ ಸಿಪಿಎಂನ ಜಾನ್ ಬ್ರಿಟ್ಟಾಸ್ ಸೇರಿದಂತೆ ಬಹಳಷ್ಟು ನಾಯಕರು ಭಾಗವಹಿಸಿದ್ದರು.
ಸಿಇಸಿ ವಿರುದ್ಧದ ಆರೋಪಗಳು, ಎಸ್ಐಆರ್ ಪ್ರಕ್ರಿಯೆ ಹಾಗೂ ಮತಗಳ್ಳತನದ ಆರೋಪಗಳ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲು ಮೈತ್ರಿಕೂಟ ನಿರ್ಧರಿಸಿದೆ. ಮೈತ್ರಿಕೂಟದ ಪ್ರತಿಯೊಂದು ಪಕ್ಷದ ಒಬ್ಬೊಬ್ಬ ನಾಯಕರು ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ ಎಂದು ನಾಯಕರು ತಿಳಿಸಿದ್ದಾರೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಮತದಾನದ ಹಕ್ಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಾಂಕೇತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮತಗಳ್ಳತನದ ವಿರುದ್ಧ ಇಂಡಿಯಾ ಮೈತ್ರಿಕೂಟದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ ಎಂಬ ಮಾಹಿತಿ ತಿಳಿದುಬಂದಿದೆ.


