Homeಕರ್ನಾಟಕಐತಿಹಾಸಿಕ ಶ್ರೀರಂಗಪಟ್ಟಣ ದಸರಾಗೆ ಸಚಿವ ಚಲುವರಾಯಸ್ವಾಮಿ, ನಟ ರವಿಚಂದ್ರನ್ ಚಾಲನೆ

ಐತಿಹಾಸಿಕ ಶ್ರೀರಂಗಪಟ್ಟಣ ದಸರಾಗೆ ಸಚಿವ ಚಲುವರಾಯಸ್ವಾಮಿ, ನಟ ರವಿಚಂದ್ರನ್ ಚಾಲನೆ

ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ತೊಟ್ಟಿಲಾದ ಪವಿತ್ರ ಶ್ರೀರಂಗಪಟ್ಟಣ ದಸರಾಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ನಟ ರವಿಚಂದ್ರನ್ ಅವರೊಂದಿಗೆ ಚಾಲನೆ ನೀಡಿದರು.

ದಸರಾ ಮಹೋತ್ಸವದ ಅಂಗವಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಗ್ರಾಮದ ಬಾಬುರಾಯನ ವೃತ್ತದ ಬನ್ನಿಮಂಟಪದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಮಧ್ಯಾಹ್ನ ಸರಿಯಾಗಿ 3:17ಕ್ಕೆ ಸಚಿವರು ಸೇರಿದಂತೆ ಗಣ್ಯರು, ಧನಂಜಯ ಆನೆಯ ಮೇಲೆ ವಿರಾಜಮಾನಳಾಗಿದ್ದ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ನಾಲ್ಕು ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ಶ್ರೀರಂಗಪಟ್ಟಣ ದಸರಾಗೆ ಚಾಲನೆ ನೀಡಿದರು.

ಪೂಜೆಗೆ ಮುನ್ನ ಬನ್ನಿ (ಶಮಿ) ಪೂಜೆ ನೆರವೇರಿಸಿದ ಸಚಿವರು “ನಾಡಿನಲ್ಲಿ ಉತ್ತಮ ಮಳೆಯಾಗಲಿ, ಸರ್ವರಿಗೂ ಒಳಿತಾಗಲಿ ಹಾಗೂ ರಾಜ್ಯ ಸುಭಿಕ್ಷವಾಗಿರಲಿ” ಎಂದು ಪ್ರಾರ್ಥಿಸಿದರು.

ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹೊತ್ತು ಧನಂಜಯ ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದರೆ, ಕುಮ್ಕಿ ಆನೆಗಳಾದ ರೂಪ ಮತ್ತು ಲಕ್ಷ್ಮಿಯ ನಡಿಗೆಗೆ ನೆರೆದಿದ್ದ ಅಸಂಖ್ಯಾತ ಜನರು ಮನಸೋತರು.

ಇದೇ ವೇಳೆ 62 ಕಲಾ ತಂಡಗಳು ಹಾಗೂ 10 ಸ್ತಬ್ಧಚಿತ್ರಗಳ ಮೆರವಣಿಗೆಗೆ ಸಚಿವರು ಹಸಿರು ನಿಶಾನೆ ತೋರಿದರು. ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳು ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಅನಾವರಣಗೊಳಿಸಿದವು. ವಿವಿಧ ಕಲಾತಂಡಗಳ ಪ್ರದರ್ಶನ ಹಾಗೂ ಸಾಂಪ್ರದಾಯಿಕ ಮೆರವಣಿಗೆಯು ದಸರಾ ಮಹೋತ್ಸವದ ಮೆರುಗನ್ನು ಹೆಚ್ಚಿಸಿತು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು “ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊರುತ್ತಿದ್ದ ಧನಂಜಯ ಆನೆ, ಈಗ ಶ್ರೀರಂಗಪಟ್ಟಣದ ದಸರಾದಲ್ಲೂ ತಾಯಿಯನ್ನು ಹೊರುತ್ತಿರುವುದು ನಮ್ಮ ಪುಣ್ಯ. ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಶ್ರಮದಿಂದ ದಸರಾ ಯಶಸ್ವಿಯಾಗಿ ನಡೆಯುತ್ತಿದೆ” ಎಂದರು.

ಪಾರಂಪರಿಕ ದಸರಾಗೆ ರಾಜ್ಯ ಸರ್ಕಾರ ನಿರೀಕ್ಷಿತ ಅನುದಾನ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ “ಅನುದಾನ ಎಷ್ಟು ಕೊಟ್ಟರೂ ಸಾಲದು. ಪ್ರತಿ ವರ್ಷ ಅನುದಾನದ ಮೊತ್ತ ಹೆಚ್ಚಾಗುತ್ತಲೇ ಇದೆ. ಆದರೆ ಆಚರಣೆಗೆ ಯಾವುದೇ ಕೊರತೆಯಾಗದಂತೆ ಅನುದಾನ ಬಿಡುಗಡೆ ಮಾಡಲಾಗಿದೆ” ಎಂದು ಸ್ಪಷ್ಟಪಡಿಸಿದರು.

ಆಡಂಬರದ ಕಾವೇರಿ ಆರತಿ ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ “ನಾವು ಕಾವೇರಿ ತಾಯಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದೇವೆ. ಕಾವೇರಿಯನ್ನೇ ನಂಬಿ ನಾವು ಜೀವನ ನಡೆಸುತ್ತಿದ್ದೇವೆ. ನಾಡಿನ ಜನರಿಗೆ ಶಾಂತಿ-ನೆಮ್ಮದಿ ಸಿಗಲಿ, ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಇದನ್ನೆಲ್ಲ ಆಡಂಬರ ಎನ್ನುವವರಿಗೆ ನಾವೇನು ಮಾಡಲು ಸಾಧ್ಯ?” ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಚಿವರ ಪತ್ನಿ ಧನಲಕ್ಷ್ಮಿ ಚಲುವರಾಯಸ್ವಾಮಿ, ಸಚಿವರಾದ ಎಚ್.ಸಿ. ಬಾಲಕೃಷ್ಣ, ಪಿ.ಎಂ. ನರೇಂದ್ರಸ್ವಾಮಿ‌, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಕದಲೂರು ಉದಯ್, ರವಿಕುಮಾರ್ ಗಣಿಗ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments