ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಯಾಗಿ ಇಲ್ಲವೇ ನಗರಸಭೆ, ನಗರಪಾಲಿಕೆಯಲ್ಲಿ ಸೇರ್ಪಡೆಯಾಗಿ ಸಂಪೂರ್ಣ ಹಸ್ತಾಂತರವಾದ ಬಳಿಕವೂ ಗ್ರಾ.ಪಂ. ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಬ್ಯಾಂಕ್ ಖಾತೆಯ ಸಹಿತ ಕೆಲವು ಗ್ರಾಮ ಪಂಚಾಯತಿಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಆದ ಬಳಿಕವೂ ಕೆಲವು ಪಂಚಾಯತಿಗಳಲ್ಲಿ ಅಧಿಕೃತ ಮಾದರಿ ಸಹಿ ಮತ್ತು ಸೀಲು ಬಳಸಿ ಬ್ಯಾಂಕ್ ಖಾತೆಯ ವಹಿವಾಟು ನಡೆದಿದೆ ಎಂಬ ವರದಿ ಹಿನ್ನೆಲೆಯಲ್ಲಿ ಈ ತನಿಖೆಗೆ ಆದೇಶಿಸಿದ್ದಾರೆ.
ಕೆಲವು ಪ್ರಕರಣಗಳಲ್ಲಿ ಗ್ರಾಮ ಪಂಚಾಯತಿಯ ಅಧೀನದಲ್ಲಿದ್ದ ಕೆಲವು ಗ್ರಾಮಗಳು ಮಾತ್ರವೇ ನಗರಸಭೆ, ನಗರ ಪಾಲಿಕೆಗೆ ಹಸ್ತಾಂತರವಾಗಿದ್ದು, ಹಸ್ತಾಂತರಿತ ಗ್ರಾಮಗಳಲ್ಲಿ ಪಂಚಾಯತಿ ವತಿಯಿಂದ ಕೈಗೊಂಡಿದ್ದ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಪಂಚಾಯತಿಯೇ ಹಣ ಭರಿಸುವಂತಾಗಿದೆ ಎಂಬ ಮಾಹಿತಿಯೂ ಬಂದಿದ್ದು, ಈ ಬಗ್ಗೆಯೂ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಹಸ್ತಾಂತರ ಆಗಿರುವ ಗ್ರಾಮಪಂಚಾಯತಿಗಳ ಬ್ಯಾಂಕ್ ಖಾತೆಗಳಲ್ಲಿ ಅಕ್ರಮವಾಗಿ ವಹಿವಾಟಾಗಿದೆಯೇ? ಹಸ್ತಾಂತರ ನಂತರವೂ ಗ್ರಾಮಗಳ ಕಾಮಗಾರಿಗೆ ಗ್ರಾಮ ಪಂಚಾಯತಿ ವತಿಯಿಂದ ಹಣ ಭರಿಸಲಾಗಿದೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಲು ಒಂದು ಸಮಿತಿ ರಚಿಸಿ, ವರದಿಯನ್ನು 30 ದಿನಗಳ ಒಳಗಾಗಿ ಕಡತದಲ್ಲಿ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಕೋಳಾರ, ಅಲಿಯಾಬಾದ್, ಅಮಲಾಪೂರ ಗ್ರಾ.ಪಂ.ನಲ್ಲಿ ಅಕ್ರಮ ಆರೋಪ
ಬೀದರ್ ನಗರಪಾಲಿಕೆಗೆ ಸಂಪೂರ್ಣ ಹಸ್ತಾಂತರವಾದ ತರುವಾಯ ಬೀದರ್ ಜಿಲ್ಲಾ ಪಂಚಾಯತಿ ಅಧೀನದಲ್ಲಿದ್ದ ಕೋಳಾರ, ಅಲಿಯಾಬಾದ್ ಮತ್ತು ಅಮಲಾಪೂರ ಗ್ರಾಮ ಪಂಚಾಯತಿಗಳ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆದು ಹಣ ವೆಚ್ಚವಾಗಿರುವ ಬಗ್ಗೆಯೂ ತನಿಖೆಗೆ ಆದೇಶ ನೀಡಿದ್ದಾರೆ.
ಇದರಲ್ಲಿ ಗ್ರಾಮಪಂಚಾಯತಿಗಳಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮತ್ತು ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರುವ ಸಾಧ್ಯತೆಯಿದ್ದು, ಹಸ್ತಾಂತರಗೊಂಡ ಬ್ಯಾಂಕ್ ಖಾತೆಗಳ ವಹಿವಾಟು ನಡೆಯಲು ಹೇಗೆ ಸಾಧ್ಯ. ಇದಕ್ಕೆ ಅಧಿಕೃತ ಆದೇಶಗಳಿತ್ತೆ ಅಥವಾ ಅಧಿಕೃತ ಮಾದರಿ ಸಹಿ ಮತ್ತು ಕಚೇರಿಯ ಸೀಲುಗಳ ದುರ್ಬಳಕೆ ಆಗಿದೆಯೇ ಎಂಬ ಬಗ್ಗೆ ತನಿಖೆ ಮಾಡಿಸಿ, ಸಹಿಗಳ ನೈಜತೆಯನ್ನು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಲ್ಲಿ, ಸಂಬಂಧಿತ ಸಿಬ್ಬಂದಿಯನ್ನು ಅಮಾನತು ಮಾಡಿ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಎಫ್.ಐ.ಆರ್. ಮಾಡಿಸಲು ಕ್ರಮ ವಹಿಸುವಂತೆಯೂ ಈಶ್ವರ ಖಂಡ್ರೆ ಸೂಚಿಸಿದ್ದಾರೆ.


